ಭಾನುವಾರ, ಏಪ್ರಿಲ್ 8, 2018

ವ್ಯಕ್ತಿ ವಿಶೇಷತೆ

*ನಮ್ಮ ರಾಜ್ಯದಲ್ಲೀಗ ವಿಧಾನ ಸಭೆ ಚುನಾವಣೆ ಸಂದರ್ಭ. ಪ್ರಚಾರದ ರಂಗು ರಾಜ್ಯವನ್ನಾವರಿಸತೊಡಗಿದೆ. ಅಲ್ಲಲ್ಲಿ ಕಾಣಸಿಕ್ಕುವ ಬ್ಯಾನರ್​ಗಳಲ್ಲಿ ಚುನಾವಣ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಹೆಸರಿನ ಜತೆಗೆ ‘ಅನಾಥ ರಕ್ಷಕ’, ‘ಅನಾಥ ಬಂಧು’ ಇತ್ಯಾದಿ ವಿಶೇಷಣಗಳನ್ನು ಕೂಡ ಕಾಣುತ್ತಿದ್ದೇವೆ. ಅನಾಥರಿಗೋಸ್ಕರ ಇವರ ಕೊಡುಗೆಯಾದರೂ ಏನು? ಅನಾಥರು ಬದುಕಿನಲ್ಲಿ ಎದುರಿಸುವ ಸಂಕಷ್ಟಗಳ ಅರಿವು ಇವರಿಗೆ ಬಿಡಿ, ನಮ್ಮಲ್ಲಿ ಬಹುತೇಕರಿಗೂ ಇರಲ್ಲ. ಸಾಮಾನ್ಯವಾಗಿ ‘ಅನಾಥ’ ಎಂಬ ಪದ ಕೇಳಿದಾಕ್ಷಣ ಮನಸ್ಸು ಗುನುಗುನಿಸುವ ಹಾಡೊಂದಿದೆ. 1990ರ ಜುಲೈನಲ್ಲಿ ತೆರೆಕಂಡ ಶಂಕರ್​ನಾಗ್ ನಟನೆಯ ‘ಹೊಸಜೀವನ’ ಎಂಬ ಸಿನಿಮಾದ್ದು. ಆ ಹಾಡಿನ ಸಾಹಿತ್ಯ ‘‘ಅನಾಥ ಮಗುವಾದೆ ನಾನು.. ಅಪ್ಪನೂ ಅಮ್ಮನೂ ಇಲ್ಲ..’ ಎಂದು ಸಾಗುತ್ತದೆ.*
==========
*ಅಂದ ಹಾಗೆ ‘ಅನಾಥ’ರ ವಿಷಯ ಯಾಕೆ ಬಂತು ಅಂತೀರಾ.. ಮಹಾರಾಷ್ಟ್ರ ಸರ್ಕಾರ ದೇಶದಲ್ಲೇ ಮೊದಲ ಬಾರಿ ಅನಾಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ 1 ಮೀಸಲು ಸೌಲಭ್ಯವನ್ನು ಒದಗಿಸುವ ನಿರ್ಣಯವನ್ನು ಏಪ್ರಿಲ್ 2ರಂದು ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರದ ಹಿಂದೆ 23 ವರ್ಷದ ಯುವತಿ ಅಮೃತಾ ಕರವಂದೆ ಅವರ ಹೋರಾಟ ಮತ್ತು ಪ್ರಯತ್ನ ಇದೆ. ಅನಾಥರ ಬದುಕಿಗೆ ಹೊಸ ದಿಶೆ ಒದಗಿಸಿದ ಅಮೃತಾ ವ್ಯಕ್ತಿ ಚಿತ್ರಣ ನೀಡುವುದಕ್ಕೆ ಇದೊಂದು ನಿಮಿತ್ತ.*
=============
*ಅವರ ‘ಅನಾಥ’ ಬದುಕಿನ ಕಥೆ ಆರಂಭವಾಗುವುದು ಗೋವಾದಿಂದ..*
===========
*ಎರಡು ದಶಕದ ಹಿಂದಿನ ಘಟನೆ. ತಂದೆಯೊಬ್ಬ ಎರಡೋ ಮೂರೋ ವರ್ಷದ ಹೆಣ್ಮಗಳನ್ನು ಕರೆದುಕೊಂಡು ಗೋವಾದ ಒಂದು ಅನಾಥಾಲಯದ ಮುಂದೆ ಹಾಜರಾಗುತ್ತಾರೆ. ಅಲ್ಲಿನ ಮುಖ್ಯಸ್ಥರನ್ನು ಕಂಡು ಆ ಹೆಣ್ಮುಗುವನ್ನು ಅಲ್ಲಿ ಒಪ್ಪಿಸಿ, ಹಿಂತಿರುಗುತ್ತಾರೆ. ಆ ತಂದೆ ಯಾಕೆ ಹಾಗೆ ಮಾಡಿದರೋ? ಅದರ ಹಿಂದಿನ ಕಥೆ ಏನೋ ಒಂದೂ ಗೊತ್ತಿಲ್ಲ. ಆದಾಗ್ಯೂ, ಈ ‘ಅನಾಥ’ ಬದುಕಿನ ‘ದೈನ್ಯ’ ಕಥನವನ್ನು ಬಿಬಿಸಿ ಸುದ್ದಿಸಂಸ್ಥೆ ಚಿತ್ರಿಸಿದ್ದು, ಅಮೃತಾ ಮಾತಿನಲ್ಲೇ ಓದಿದರೆ ಹೃದಯರ್ಸ³ಯೆನಿಸುವುದು. ಯಾವುದೇ ಸಿನಿಮಾ ಕಥೆಗಿಂತ ಭಿನ್ನವಲ್ಲದ ಬದುಕಿನ ಚಿತ್ರಣವದು.. ‘ತಂದೆ ನನ್ನನ್ನು ಅನಾಥಾಲಯಕ್ಕೆ ಸೇರಿಸಿದಾಗ ಪುಟ್ಟ ಬಾಲೆ. ಅಂದು ಅವರು ಅನಾಥಾಲಯದ ನೋಂದಣಿ ಪುಸ್ತಕದಲ್ಲಿ ನನ್ನ ಹೆಸರು ‘ಅಮೃತಾ ಕರವಂದೆ’ ಎಂದು ಬರೆದು ಹೋಗಿದ್ದರು. ಹಾಗೆ ನನ್ನ ಹೆಸರು ಅಮೃತಾ ಎಂಬುದು ನನಗೆ ಗೊತ್ತಾಗಿದ್ದು. ಆ ಅನಾಥಾಲಯದಲ್ಲಿ ನನ್ನಂತೆಯೇ ‘ಅನಾಥ’ರೆನಿಸಿಕೊಂಡ ಅನೇಕ ಬಾಲಕಿಯರಿದ್ದರು. ಸಾಮಾನ್ಯ ಶಿಕ್ಷಣವನ್ನು ಅನಾಥಾಲಯವೇ ಒದಗಿಸಿತು. ಕಲಿಕೆಯಲ್ಲಿ ಚುರುಕಾಗಿದ್ದ ನನಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ, ಅನಾಥಾಲಯದಲ್ಲಿ 18 ವರ್ಷ ತುಂಬುವವರೆಗೆ ಮಾತ್ರವೇ ಉಳಿದುಕೊಳ್ಳಲು ಅವಕಾಶ. ಹದಿನೆಂಟು ವರ್ಷ ತುಂಬಿದ ಅನೇಕ ಯುವತಿಯರನ್ನು ಸೂಕ್ತರಿಗೆ ಕೊಟ್ಟು ವಿವಾಹ ನೆರವೇರಿಸಿ ಕುಟುಂಬ ಜೀವನ ನಡೆಸಲು ಕಳುಹಿಸಿಕೊಡುತ್ತಿದ್ದರು ಅವರು. ನನಗೆ ಹೆಚ್ಚಿನ ಶಿಕ್ಷಣ ಪಡೆಯಬೇಕೆನಿಸಿದ್ದರಿಂದ ವಿವಾಹವನ್ನು ನಿರಾಕರಿಸಿದೆ. ಹೀಗಾಗಿ, 18 ವರ್ಷ ತುಂಬುತ್ತಲೇ ಅಲ್ಲಿಂದ ಹೊರಬೀಳಬೇಕಾಯಿತು. ಅಲ್ಲಿಂದ ಹೊರಬಂದು ಎತ್ತ ಹೋಗಬೇಕು ಗೊತ್ತಿಲ್ಲ. ಹೆಚ್ಚುವರಿ ಶಿಕ್ಷಣ ಪಡೆಯಬೇಕು ಎಂಬಾಸೆಯಿಂದ ಗೋವಾದಲ್ಲಿ ರೈಲು ಹತ್ತಿ ಪುಣೆಗೆ ಬಂದಿಳಿದೆ. ಗುರುತು ಪರಿಚಯವೇ ಇರದ ಪುಣೆಯ ರೈಲು ನಿಲ್ದಾಣದಲ್ಲಿ ಇಳಿದಾಗ ಕತ್ತಲಾಗಿತ್ತು. ಮುಂದೇನು ಎಂಬ ಸ್ಪಷ್ಟತೆ ಇಲ್ಲದ ನನ್ನಲ್ಲಿ ಭಯ, ಆತಂಕ ಮನೆಮಾಡಿತ್ತು. ಒಂದರೆಕ್ಷಣ ಯಾರೂ ಇಲ್ಲದ ನಾನು ಸತ್ತರೇನು? ಬದುಕುವುದಾದರೂ ಯಾರಿಗೋಸ್ಕರ.. ರೈಲಿನಡಿಗೆ ಬಿದ್ದು ಸತ್ತುಬಿಡೋಣ ಎಂದೆನಿಸಿತ್ತು.*
============
*ಆದರೂ, ಸಾಯಲು ಮನಸಾಗಲಿಲ್ಲ. ಧೈರ್ಯ ತಂದುಕೊಂಡು ರಾತ್ರಿ ಕಳೆದೆ. ಮರುದಿನ ಅಲ್ಲಿ ಕೆಲವು ಮನೆಗಳಿಗೆ ತೆರಳಿ ಮನೆಗೆಲಸ ಮಾಡುವುದಾಗಿ ಹೇಳಿ ಕೆಲಸ ಕಂಡುಕೊಂಡೆ. ಒಂದೆರಡು ಕಿರಾಣಿ ಅಂಗಡಿಗಳಲ್ಲೂ ಸಹಾಯಕಿಯಾಗಿ ಕೆಲಸ ಮಾಡತೊಡಗಿದೆ. ಒಂದಿಷ್ಟು ಹಣ ಒಟ್ಟುಗೂಡಿಸಿದೆ. ಈ ನಡುವೆ ಕೆಲವರ ಪರಿಚಯವಾಯಿತು. ಹಾಗೆ ಸ್ನೇಹಿತನೊಬ್ಬನ ನೆರವಿನೊಂದಿಗೆ ಅಹ್ಮದ್​ನಗರದ ಸಂಜೆ ಕಾಲೇಜೊಂದರಲ್ಲಿ ಪ್ರವೇಶ ಗಿಟ್ಟಿಸಿಕೊಂಡೆ.*
===============
*ಹಗಲಿಡೀ ಕೆಲಸ, ಸಂಜೆ ಕಾಲೇಜು ಶಿಕ್ಷಣ. ಇಷ್ಟೆಲ್ಲ ಆದರೂ ನನಗೆ ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಏನೂ ಇರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸೂರು ಕಂಡುಕೊಂಡಿದ್ದೆ. ಅಲ್ಲೇ ಊಟ, ವಸತಿ. ಎಲ್ಲರ ನೆರವು ಪಡೆದು ಪದವಿ ಶಿಕ್ಷಣ ಪೂರ್ತಿಗೊಳಿಸಿದೆ.*
============
*ಇದಾಗಿ ಮಹಾರಾಷ್ಟ್ರ ಲೋಕ ಸೇವಾ ಆಯೋಗದ ಪರೀಕ್ಷೆ ಎದುರಿಸಿ, 100ಕ್ಕೆ 39 ಅಂಕ ಗಳಿಸಿದೆ. ಮಹಿಳಾ ಮೀಸಲು ವಿಭಾಗದಲ್ಲಿ ಆಯ್ಕೆಯಾಗಲು ಕನಿಷ್ಠ 35 ಅಂಕ ಗಳಿಸಿದ್ದರೆ ಸಾಕಿತ್ತು. ಇದಕ್ಕಿಂತ ಹೆಚ್ಚು ಅಂಕ ನನಗೆ ಬಂದಿತ್ತು. ಆದರೆ, ಸಮಸ್ಯೆ ಎದುರಾಗಿದ್ದೇ ಅಲ್ಲಿ. ಅವರು ಪಾಲಕರ ಜಾತಿ ಸರ್ಟಿಫಿಕೇಟ್ ಕೇಳಿದರು. ಪಾಲಕರು ಯಾರು, ಜಾತಿ ಧರ್ಮ ಯಾವುದೆಂದು ಅರಿಯದ ನಾನು ಎಲ್ಲಿಂದ ತರಲಿ ಆ ಪ್ರಮಾಣಪತ್ರವನ್ನು! ಕೊನೆಗೆ ಅವರು ನನ್ನನ್ನು ಸಾಮಾನ್ಯ ವರ್ಗದ ವಿಭಾಗಕ್ಕೆ ಸೇರಿಸಿದರು. ಅಲ್ಲಿ ಕನಿಷ್ಠ ಅಂಕ 46 ಬೇಕಿತ್ತು. ಅಷ್ಟು ನನಗೆ ಸಿಕ್ಕಿರಲಿಲ್ಲ. ಅಲ್ಲಿಗೆ ಆ ಉದ್ಯೋಗ ಕನಸಾಗಿ ಉಳಿಯಿತು. ಇದಾಗಿ ಪಿಎಸ್​ಐ, ಮಾರಾಟ ತೆರಿಗೆ ಇನ್​ಸ್ಪೆಕ್ಟರ್ ಮುಂತಾದ ಪರೀಕ್ಷೆಗಳನ್ನೂ ಎದುರಿಸಿದೆ. 2017ರ ಅಕ್ಟೋಬರ್​ನಲ್ಲಿ ಫಲಿತಾಂಶ ಪ್ರಕಟವಾದಾಗ, ಆಯ್ಕೆ ವಿಷಯದಲ್ಲಾಗುತ್ತಿದ್ದ ತೊಂದರೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡುವುದಕ್ಕಾಗಿ ಪ್ರತಿಯೊಬ್ಬ ಅಧಿಕಾರಿಯ ಬಳಿಗೂ ಹೋದೆ. ಪ್ರಯೋಜನವಾಗಲಿಲ್ಲ. ‘ಅನಾಥ’ರೆನಿಸಿಕೊಂಡ ನಮಗೆ ಯಾವುದೇ ಕಾನೂನು ನೆರವಿಗೆ ಬರಲಿಲ್ಲ. ಇದರಿಂದ ಆಘಾತವಾಯಿತು. ಕೊನೆಗೆ ಮುಂಬೈಗೆ ತೆರಳಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಅಲ್ಲಿ, ಅವರ ಸಲಹೆಗಾರರಾದ ಶ್ರೀಕಾಂತ್ ಭಾರತೀಯರನ್ನಷ್ಟೇ ಭೇಟಿಯಾಗಲು ಅವಕಾಶ ಸಿಕ್ಕಿತು. ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟೆ. ಅವರು ಅದನ್ನು ಮುಖ್ಯಮಂತ್ರಿಯವರಿಗೆ ತಿಳಿಸಿ ಭೇಟಿಗೆ ಅವಕಾಶ ಮಾಡಿಕೊಟ್ಟರು. ಮುಂದಿನದ್ದು ನಿಮಗೆ ಗೊತ್ತೇ ಇದೆ. ನನ್ನ ಮಟ್ಟಿಗೆ ಇದು ಬಹುದೊಡ್ಡ ಹೋರಾಟ. ಈಗ ಮಹಾರಾಷ್ಟ್ರದಲ್ಲಿ ಒಂದಿಷ್ಟು ಪರಿಹಾರ ಸಿಕ್ಕಿದೆ. ಇದು ದೇಶಾದ್ಯಂತ ಇರುವ ಅನಾಥರಿಗೆ ದಕ್ಕಬೇಕು’. ಹೀಗೆ ಹೋರಾಟದ ಕಥನವನ್ನು ತೆರೆದಿಟ್ಟ ಅಮೃತಾ ಸದ್ಯ ಪುಣೆಯ ಮಾಡರ್ನ್ ಕಾಲೇಜ್​ನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೀಸಲು ಸೌಲಭ್ಯ ದೇಶಾದ್ಯಂತ ಇರುವ ಇತರೆ ಅನಾಥರಿಗೂ ಸಿಗಬೇಕೆಂಬ ಅವರ ಆಶಯದಲ್ಲಿ ತಪ್ಪೇನೂ ಇಲ್ಲ. ಅರ್ಹರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಎಲ್ಲರ ಸಹಕಾರ, ಬೆಂಬಲವೂ ಅಗತ್ಯ.*

================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ