ಶುಕ್ರವಾರ, ಏಪ್ರಿಲ್ 13, 2018

ಚುನಾವಣೆ ನೀತಿ ಸಂಹಿತೆ ಅಂದರೇನು…?


ಚುನಾವಣಾ ಘೋಷಣೆಯಾಗುತ್ತಿದ್ದಂತೆ ಅದರ ಹಿನ್ನೆಲೆಯಲ್ಲೇ ನೀತಿ ಸಂಹಿತೆ ಜಾರಿಯಾಗುವುದು ನಿಮಗೆ ಗೊತ್ತೇ ಇದೆ, ಈ ನೀತಿ ಸಂಹಿತೆ ಎಂದರೇನು..? ನೀತಿ ಸಂಹಿತೆ ಜಾರಿಯಾದಾಗ ಏನು ಮಾಡಬೇಕು, ಏನು ಮಾಡಬಾರದು ..?ಎಂಬ ನಿಮ್ಮ ಕೆಲವು ಅನುಮಾನಗಳಿಗೆ ಇಲ್ಲದೆ ವಿವರಣೆ ನೀಡಲಾಗಿದೆ.   ನೀತಿ ಸಂಹಿತೆ ಎಂಬುದು ತುಂಬ ಕಟ್ಟುನಿಟ್ಟಾದದ್ದು. ಚುನಾವಣೆ ನೀತಿ ಸಂಹಿತೆ ಅಂದರೆ ತುಂಬ ಕಟ್ಟುನಿಟ್ಟಾದ, ಕಠಿಣವಾದ ವಿಚಾರ ಎಂಬುದು ಬಹುತೇಕರಿಗೆ ತಿಳಿದಿರುತ್ತದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಏನಿದು ಚುನಾವಣೆ ನೀತಿ ಸಂಹಿತೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಇದು. ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಸಂಕ್ಷಿಪ್ತ ವಿವರಣೆ.  ಅಂದ ಹಾಗೆ ಜನ ಸಾಮಾನ್ಯರ ಹಣಕಾಸು ವ್ಯವಹಾರದಲ್ಲೂ ಈ ಚುನಾವಣೆ ಪರಿಣಾಮ ಬೀರುವುದು ಸತ್ಯ. ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಚುನಾವಣಾಧಿಕಾರಿಗಳು ಯಾವ ಮುಲಾಜು ನೋಡದೆ ಕಾರ್ಯ ನಿರ್ವಹಿಸುತ್ತಾರೆ ಎಂಬುದು ನಿರೀಕ್ಷೆ.

ಹೊಸ ಯೋಜನೆ, ವಿನಾಯಿತಿ ಘೋಷಣೆ ಮಾಡುವಂತಿಲ್ಲ :
ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರಕಾರದಿಂದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಅಥವಾ ವಿನಾಯಿತಿ ಅಥವಾ ಭರವಸೆ ಯಾವುದೇ ರೀತಿಯಲ್ಲಿ ಘೋಷಣೆ ಮಾಡುವಂತಿಲ್ಲ. ಶಂಕುಸ್ಥಾಪನೆ ಮುಂತಾದವು ಮಾಡುವಂತಿಲ್ಲ. ಮತದಾರರ ಮೇಲೆ ಒಂದು ಪಕ್ಷಕ್ಕೆ ಒಲವು ಮೂಡುವಂಥದ್ದನ್ನು ಮಾಡುವಂತಿಲ್ಲ.

ಅಧಿಕಾರಿಗಳು ಪಾಲ್ಗೊಳ್ಳಬಹುದು, ರಾಜಕಾರಣಿಗಳಿಗೆ ನಿಷಿದ್ಧ :
ಈ ಮಿತಿಗಳು ಹೊಸ ಯೋಜನೆ ಹಾಗೂ ಅದಾಗಲೇ ನಡೆಯುತ್ತಿರುವ ಯೋಜನೆಗಳಿಗೆ ಅನ್ವಯಿಸುತ್ತದೆ. ಆದರೆ ಇದು ರಾಷ್ತ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳು ನಿಲ್ಲಿಸಬೇಕು ಅಥವಾ ತಡ ಮಾಡಬೇಕು ಅಂತಲ್ಲ. ಇಂಥ ಯೋಜನೆಗಳಲ್ಲಿ ಅಧಿಕಾರಿಗಳು ಪಾಲ್ಗೊಳ್ಳಬಹುದೇ ವಿನಾ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಪಕ್ಷದ ಅಭಿಮಾನಿಗಳು, ಕಾರ್ಯಕ್ರಮಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಆಗುವಂತೆ ಮಾಡುವಂತಿಲ್ಲ.

ಬಜೆಟ್ ನಲ್ಲಿ ಘೋಷಣೆ ಆಗಿದ್ದ ಯೋಜನೆಗಳಿಗೆ ಅಡ್ಡಿ ಇಲ್ಲ :
ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಗಳು, ನೀತಿ ಸಂಹಿತೆ ಜಾರಿಗೆ ಮುನ್ನವೇ ಘೋಷಣೆಯಾದ ಯೋಜನೆಗಳನ್ನು ಚುನಾವಣೆ ನೀತಿ ಸಂಹಿತ ಘೋಷಣೆ ಆದ ಮೇಲೂ ಕೈಗೆತ್ತಿಕೊಳ್ಳಲು ಯಾವುದೇ ತಡೆ ಇಲ್ಲ. ಆದರೆ ಅದು ಮತದಾರರನ್ನು ಸೆಳೆಯುವ ಉದ್ದೇಶದಿಂದ ಕೈಗೊಂಡಿದ್ದಾಗಿರಬಾರದು.

ಹೊಸದಾಗಿ ಸರಕಾರಿ ಯೋಜನೆಗಳಿಗೆ ಅನುದಾನಗಳನ್ನು ನೀಡುವಂತಿಲ್ಲ :
ಹೊಸದಾಗಿ ಸರಕಾರಿ ಯೋಜನೆಗಳಿಗೆ ಅನುದಾನಗಳನ್ನು ನೀಡುವಂತಿಲ್ಲ. ಸಚಿವರು ಯೋಜನೆಗಳ ಪರಿಶೀಲನೆ ಮಾಡುವುದು ಕೂಡ ನಿಷಿದ್ಧ. ಅನುಕೂಲ ನೀಡುವ ಯೋಜನೆಗಳು ಅದು ಸದ್ಯಕ್ಕೆ ಚಾಲ್ತಿಯಲ್ಲಿದ್ದರೂ ಅವುಗಳನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ನಿಲ್ಲಿಸಬೇಕಾಗುತ್ತದೆ. ಹೊಸದಾಗಿ ಕಲ್ಯಾಣ ಯೋಜನೆಗಳಿಗೆ ಹಣಕಾಸು ಬಿಡುಗಡೆ ಮಾಡುವಂತಿಲ್ಲ. ಚುನಾವಣೆ ಆಯೋಗದ ಒಪ್ಪಿಗೆ ಇಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ಕಾಮಗಾರಿ ನೀಡುವಂತಿಲ್ಲ. ಸಂಸದರ ನಿಧಿ (ರಾಜ್ಯಸಭಾ ಸದಸ್ಯರೂ ಒಳಗೊಂಡಂತೆ), ಶಾಸಕರು/ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹೀಗೆ ರಾಜ್ಯದಲ್ಲಿ ಯಾವುದೇ ಕಾರ್ಯ ಚಟುವಟಿಕೆಗೆ ಇದು ಅನ್ವಯ ಆಗುತ್ತದೆ.

ಈಗಾಗಲೇ ಆರಂಭವಾದ ಕೆಲಸಕ್ಕೆ ಅಡ್ಡಿಯಿಲ್ಲ :
ವರ್ಕ್ ಆರ್ಡರ್ ನೀಡಿದ್ದರೂ ಇನ್ನೂ ಕಾಮಗಾರಿ ಶುರುವಾಗಿಲ್ಲ ಅನ್ನೋದಾದರೆ ಈಗ ಯಾವುದೇ ಕೆಲಸವನ್ನು ಶುರು ಮಾಡುವಂತಿಲ್ಲ. ಚುನಾವಣೆ ಪ್ರಕ್ರಿಯೆ ಪೂರ್ತಿಗೊಂಡ ಮೇಲಷ್ಟೇ ಮಾಡಬೇಕು. ಒಂದು ವೇಳೆ ಕೆಲಸ ಆರಂಭವಾಗಿದ್ದಲ್ಲಿ ಮುಂದುವರಿಸಬಹುದು.

ಕಾಮಗಾರಿಗಳು ಪೂರ್ಣಗೊಂಡಿದ್ದಲ್ಲಿ, ಆ ಬಗ್ಗೆ ಅಧಿಕಾರಿಗಳು ಸಂಪೂರ್ಣ ತೃಪ್ತರಾಗಿದ್ದಲ್ಲಿ ಹಣ ಬಿಡುಗಡೆ ಮಾಡಬಹುದು. :
ಬರ, ಪ್ರವಾಹದಂತಹ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂಥ ಪರಿಹಾರ ಮಂಜೂರಾತಿಗೆ ಯಾವುದೇ ಅಡೆತಡೆ ಇಲ್ಲ. ಇನ್ನು ಹಿರಿಯರು, ಅಶಕ್ತರ ಸಲುವಾಗಿ ರೂಪಿಸಿದ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಮಂಜೂರಾತಿಗೆ ಮುಂಚೆ ಚುನಾವಣೆ ಆಯೋಗದ ಒಪ್ಪಿಗೆ ಪಡೆಯಬೇಕಾಗುತ್ತದೆ.

ಅಧಿಕಾರಿಗಳ ವರ್ಗಾವಣೆ ಮೇಲೆ ಕೆಲ ನಿರ್ಬಂಧ :
ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇನ್ಯಾವುದೇ ವರ್ಗಾವಣೆಗಳನ್ನು ಮಾಡುವಂತಿಲ್ಲ. ಚುನಾವಣೆ ಆಯೋಗದ ಒಪ್ಪಿಗೆ ಇಲ್ಲದೆ ಯಾವುದೇ ನೇಮಕಾತಿ, ಬಡ್ತಿಯನ್ನು ಸರಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾಡುವಂತಿಲ್ಲ. ಚುನಾವಣೆ ಪ್ರಕ್ರಿಯೆ ಪೂರ್ಣ ಆಗುವವರೆಗೆ ಇದು ಅನ್ವಯ

# ಕೇಂದ್ರ ಸರಕಾರ, ರಾಜ್ಯ ಸರಕಾರ, ಸಾರ್ವಜನಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆ, ಸ್ಥಳೀಯ ಸಂಸ್ಥೆ ಹೀಗೆ ಇಷ್ಟುದ್ದ ಪಟ್ಟಿ ಮಾಡಿರುವ ಸಂಸ್ಥೆಗಳ ಅಧಿಕಾರಿಗಳ ವಾಹನವನ್ನು ಚುನಾವಣೆ ಕೆಲಸಗಳಿಗೆ ಬಳಸುವಂತಿಲ್ಲ.

# ಇದು ರಾಜ್ಯ ಹಾಗೂ ಕೇಂದ್ರ ಸಚಿವರಿಗೂ ಅನ್ವಯ ಆಗುತ್ತದೆ. ಖಾಸಗಿ ಭೇಟಿಗಳಿಗೆ ಅವರ ಖಾಸಗಿ ವಾಹನ ಬಳಸಬಹುದು. ಅಂಥ ಭೇಟಿ ವೇಳೆ ಖಾಸಗಿ ಸಿಬ್ಬಂದಿ ಜತೆಯಲ್ಲಿ ಇರುವಂತಿಲ್ಲ. ತುರ್ತು ಸಂದರ್ಭದಲ್ಲಿ ಅಧಿಕೃತ ಕಾರಣಗಳಿಗಾಗಿ ಮುಖ್ಯಸ್ಥಾನದಿಂದ ಪ್ರಯಾಣ ಮಾಡುತ್ತಿದ್ದರೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಥವರನ್ನು ತಡೆಯುವಂತಿಲ್ಲ. ಯಾವುದೇ ರಾಜಕಾರಣಿ ರಾಜಕೀಯ ಚಟುವಟಿಕೆಯನ್ನು ಸರಕಾರಿ ಜವಾಬ್ದಾರಿಗಳೊಂದಿಗೆ ಸೇರಿಸುವಂತಿಲ್ಲ.

# ಸರಕಾರಿ ವಾಹನ ಬಳಕೆಗೆ ನಿಯಮಗಳಿವೆ :

> ತುರ್ತು ಸಂದರ್ಭ ಹೊರತು ಪಡಿಸಿ, ಕೇಂದ್ರ ಅಥವಾ ರಾಜ್ಯದ ಸಚಿವರು ಚುನಾವಣೆ ಕರ್ತವ್ಯನಿರತ ಅಧಿಕಾರಿಗಳನ್ನು ಕರೆಸಿ ಸಭೆ ಮತ್ತೊಂದು ನಡೆಸುವಂತಿಲ್ಲ.
> ಸಚಿವರಿಗೆ ನೀಡುವ ವಾಹನವನ್ನು ಅಧಿಕೃತ ನಿವಾಸ ಹಾಗೂ ಕಚೇರಿ ಮಧ್ಯದ ಪ್ರಯಾಣಕ್ಕೆ ಮಾತ್ರ ಬಳಸಬೇಕು. ಬೇರೆ ಯಾವುದೇ ರಾಜಕೀಯ ಚಟುವಟಿಕೆಗೆ ಬಳಸುವಂತಿಲ್ಲ.
> ಬೆಂಗಾವಲು ವಾಹನವನ್ನು, ಶಬ್ದ ಬರುವಂಥ ಸಾಧನವನ್ನು, ವಾಹನಗಳನ್ನು ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದು.
> ಯಾವುದೇ ಅಧಿಕಾರಿಯು ಸಚಿವರನ್ನು ಖಾಸಗಿ ಭೇಟಿ ಮಾಡುವಂತಿಲ್ಲ.
> ಸರಕಾರಿ ಹಣದಲ್ಲಿ ಜಾಹೀರಾತು ನೀಡುವಂತಿಲ್ಲ. ಪೋಸ್ಟರ್, ಬಂಟಿಂಗ್ಸ್ ಬಳಸುವಂತಿಲ್ಲ, ರಾತ್ರಿ ಹತ್ತು ಗಂಟೆ ನಂತರ ಬೆಳಗ್ಗೆ ಆರರವರೆಗೆ ಮೈಕ್ ಬಳಸುವಂತಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆಗಳನ್ನು ನಡೆಸುವಂತಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ