ಭಾನುವಾರ, ಏಪ್ರಿಲ್ 1, 2018

ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗಡಿಯಾರ ಎಲ್ಲಿದೆ ? ಗೊತ್ತೆ


ದಾವಣಗೆರೇಲಿ ಮತ್ತೂಂದು ಸಮಯದ ಯಂತ್ರ

ದಾವಣಗೆರೆ: ಗಡಿಯಾರ ಕಂಬ ದಾವಣಗೆರೆಯ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳಲ್ಲಿ ಒಂದು. ರೈಲು ನಿಲ್ದಾಣ, ಪ್ರಧಾನ ಅಂಚೆ ಕಚೇರಿ, ಹಳೆಯ ತಹಶೀಲ್ದಾರ್‌ ಕಚೇರಿ ಸಮೀಪ ಇರುವ ಗಡಿಯಾರ ಕಂಬ ಒಂದು ಕಾಲಕ್ಕೆ ನಗರಕ್ಕೆ ಸಮಯ ತೋರಿಸುವ ಹಾಗೂ ಶಬ್ದದ ಮೂಲಕ ಕೇಳಿಸುವ ಸಾಧನವಾಗಿತ್ತು. ಆದರೆ, ಕಾಲಾನಂತರ ವಾಚ್‌, ಕೈ ಗಡಿಯಾರ ಎಲ್ಲರ ಕೈ ಸೇರಿ ಅದರ ಪ್ರಾಮುಖ್ಯತೆ ಕಡಿಮೆ ಆಯಿತು. ಈಗ ಮೊಬೈಲ್‌ ಯುಗ ಆಗಿರುವುದರಿಂದ ಸಮಯ ನೋಡಲು ಗಡಿಯಾರವೇ ಬೇಕಿಲ್ಲ ಎಂಬಂತಹ ಸ್ಥಿತಿ ಇದೆ.

ದೊಡ್ಡ ದೊಡ್ಡ ಮಹಾನಗರಗಳಲ್ಲಿ ಗಡಿಯಾರ ಕಂಬ ಇರುವುದು ಆ ಊರಿಗೊಂದು ಶೋಭೆ. ಹಾಗಾಗಿಯೇ ವಿದೇಶಗಳ ಬೃಹತ್‌ ನಗರದ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಇಲ್ಲೇ ಪ್ರಮುಖ ವೃತ್ತದಲ್ಲಿ ದೊಡ್ಡ ಗಡಿಯಾರ ಕಾಣಬಹುದು. ದೊಡ್ಡ ನಗರ ಎಂಬುದಾಗಿ ಕರೆಸಿಕೊಳ್ಳಲು ಗಡಿಯಾರ ಕಂಬ ಸಹ ಇರಬೇಕು ಎಂಬ ನಂಬಿಕೆ ಇಂದಿಗೂ ಸಹ ಇದೆ.

ಇದೀಗ ದಾವಣಗೆರೆ ನಗರದಲ್ಲಿ ಅಂತಹ ಮತ್ತೂಂದು ಗಡಿಯಾರ ಕಾಣಲಿದೆ. ಆದರೆ, ಇದು ಸಂಪ್ರದಾಯಿಕವಲ್ಲ, ಅತ್ಯಾಧುನಿಕ ಗಡಿಯಾರ ಕಂಬ ಇದಾಗಿದೆ. ಎರಡು ಹಕ್ಕಿಗಳು ಹಾರಾಡುವ ಮಾದರಿ ಗಡಿಯಾರ ಹೊಂದಿರುವ ಟವರ್‌ ಅನೇಕ ವಿಶೇಷತೆಗಳನ್ನು ಹೊಂದಿದೆ. ಎಸ್‌. ನಿಜಲಿಂಗಪ್ಪ ಬಡಾವಣೆಯ ನಿಜಲಿಂಗಪ್ಪ ರಿಂಗ್‌ ರಸ್ತೆಯ ವೃತ್ತದಲ್ಲಿ ಈ ಗಡಿಯಾರ ಕಂಬ ತಲೆ ಎತ್ತಲಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ನಗರದಲ್ಲಿ ಇನ್ನೂ ಆರಂಭವೇ ಆಗದಿದ್ದರೂ ಈಗಾಗಲೇ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ. ಇದೀಗ ಈ ಸ್ಮಾರ್ಟ್‌ ಕ್ಲಾಕ್‌ ನಗರಿಗೆ ಮತ್ತೂಂದು ಗರಿಯಾಗಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಈಗಿರುವ ಹಳೆ ಗಡಿಯಾರ ಕಂಬವನ್ನು ಸಹ ಆಧುನೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ಆ ಕಾಮಗಾರಿ ಪೂರ್ಣಗೊಂಡರೆ ನಗರಕ್ಕೆ ಎರಡೆರಡು ಗಡಿಯಾರ ಕಂಬಗಳು ಲ್ಯಾಂಡ್‌ ಮಾರ್ಕ್‌ ಆಗಲಿವೆ.

ಅತಿ ವಿಶಿಷ್ಟ ಕ್ಲಾಕ್‌ 
ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಕ್ಲಾಕ್‌ ಟವರ್‌ಗೆ ಅಳವಡಿಸಲಾಗುವ ಗಡಿಯಾರ ಅತಿ ವಿಶಿಷ್ಟವಾಗಿದೆ. ಪ್ರತಿ ಗಂಟೆಗೊಮ್ಮೆ ಇಂಗ್ಲಿಷ್‌, ಕನ್ನಡದಲ್ಲಿ ಸಮಯ ಹೇಳಲಿದೆ. ಇದರ ಒಳಗೆ ಸಿಸಿ ಟಿವಿ ಕೆಮರಾ ಕಣ್ಣಿದೆ. ಅದು ತನ್ನ ಮುಂದೆ ನಡೆಯುವ ಎಲ್ಲಾ ಘಟನಾವಳಿಗಳನ್ನು ನೇರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಸಿಸಿ ಟಿವಿ ಕೆಮರಾ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಇದರ ಜೊತೆಗೆ ಗಡಿಯಾರ ತನ್ನದೇ ಆದ ಲೌಡ್‌ ಸ್ಪೀಕರ್‌ ಸಹ ಹೊಂದಿದೆ. ಹೋಳಿ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಹಾಡು, ಭಾಷಣ ಸಹ ಮಾಡಲು ಈ ಸ್ಪೀಕರ್‌ ಸಹಕಾರಿಯಾಗಲಿದೆ. ಪ್ರಮುಖ ಹಬ್ಬ, ಆಚರಣೆಗಳ ವೇಳೆ ಈ ಕಂಬ ಶುಭಾಶಯ ತಿಳಿಸುತ್ತದೆ. ಹೊಸ ವರ್ಷ, ಸಂಕ್ರಾಂತಿ ಹಬ್ಬ ಯಾವುದೇ ಇರಲಿ ಶುಭಾಶಯ ಹೇಳಲಿದೆ.

1.74 ಕೋಟಿ ರೂ.
ಗಡಿಯಾರ ಅಂದರೆ ಬರೀ ಸಮಯ ತೋರಿಸುವ, ಪ್ರತಿ ತಾಸಿಗೊಮ್ಮೆ ಎಷ್ಟು ಗಂಟೆಯಾಗಿದೆ ಎಂಬುದನ್ನು ಬೆಲ್‌ ಅಥವಾ ಧ್ವನಿಯ ಮೂಲಕ ತಿಳಿಸುವುದು ಸಾಮಾನ್ಯ. ಆದರೆ, ಈ ಗಡಿಯಾರ ಕೇವಲ ಸಮಯ ತೋರಿಸುವುದು ಮಾತ್ರವಲ್ಲ ಅನೇಕ ವಿಶೇಷತೆ ಹೊಂದಿದೆ. ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಮ್ಮ ನಗರದಲ್ಲಿ ಇಂತಹ ವಿಶೇಷ ತಂತ್ರಾಂಶ ಹೊಂದಿರುವ ಗಡಿಯಾರದ ಬೆಲೆ 40 ಲಕ್ಷ ರೂಪಾಯಿ. ಗಡಿಯಾರ ಅಳವಡಿಸಲು ವಿಶೇಷ ವಿನ್ಯಾಸದಲ್ಲಿ ಕೈಗೊಂಡಿರುವ ಇಡೀ ಕಾಮಗಾರಿಗೆ ಒಟ್ಟು 1.74 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಒರಿಸ್ಸಾದಲ್ಲಿ ತಯಾರಾಗಿರುವ ಈ ಗಡಿಯಾರ ಸೋಲಾರ್‌ ಶಕ್ತಿಯಿಂದ ಕಾರ್ಯ ನಿರ್ವಹಿಸಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ