================
ಭಾರತವು ತನ್ನ ಪ್ರಜೆಗಳಿಗೆ ಶೇ.30ರವರೆಗೆ ಆದಾಯ ತೆರಿಗೆಯನ್ನು ವಿಧಿಸುತ್ತಿದೆ. ಜೊತೆಗೆ ಅವರು ಸರ್ಚಾರ್ಜ್ ಮತ್ತು ಸೆಸ್‌ಗಳನ್ನೂ ಪಾವತಿಸುವುದು ಅನಿವಾರ್ಯವಾಗಿದೆ. ಆದರೆ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಬಹುದಾದ ಈ ದೇಶಗಳಲ್ಲಿ ಪ್ರಜೆಗಳು ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಆದಾಯ ತೆರಿಗೆಯನ್ನು ಪಾವತಿಸುವ ಅಗತ್ಯವೇ ಇಲ್ಲ.
►ಬಹಾಮಾಸ್
ಕೆರಿಬಿಯನ್ ದ್ವೀಪಸಮೂಹವಾಗಿರುವ ಬಹಾಮಾಸ್‌ನ ಜನರು ಆದಾಯ ತೆರಿಗೆಯ ಹೆಸರನ್ನೇ ಕೇಳಿಲ್ಲ.
ವ್ಯಕ್ತಿಗತ ಅಥವಾ ಕಾರ್ಪೊರೇಟ್ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಇಲ್ಲಿ ವಿಧಿಸುತ್ತಿಲ್ಲ. ಪ್ರವಾಸೋದ್ಯಮದಿಂದ ಗಳಿಕೆ ಮತ್ತು ಸ್ಟಾಂಪ್ ಶುಲ್ಕ, ಭೂ ತೆರಿಗೆ, ವ್ಯಾಟ್ ಇತ್ಯಾದಿಗಳಂತಹ ಹಲವಾರು ಪರೋಕ್ಷ ಮತ್ತು ಆಸ್ತಿ ತೆರಿಗೆಗಳು ಇಲ್ಲಿಯ ಸರಕಾರದ ಮುಖ್ಯ ಆದಾಯಮೂಲ ಗಳಾಗಿವೆ.
►ಬೆಹರೀನ್
ಮಧ್ಯಪ್ರಾಚ್ಯದ ತೈಲ ಸಂಪದ್ಭರಿತ ಬೆಹರೀನ್ ಆದಾಯ ತೆರಿಗೆ ಅಥವಾ ಕಾರ್ಪೊರೇಟ್ ತೆರಿಗೆಗಳಿಗೆ ಆಸೆಪಡದ ಅಪರೂಪದ ರಾಷ್ಟ್ರಗಳ ಲ್ಲೊಂದಾಗಿದೆ. ಆದರೆ ಭಾರತದ ಭವಿಷ್ಯನಿಧಿ ಚಂದಾದಂತೆ ಸಾಮಾಜಿಕ ಭದ್ರತೆ ದೇಣಿಗೆಯಾಗಿ ಈ ದೇಶದಲ್ಲಿಯ ಉದ್ಯೋಗದಾತರು ಮತ್ತು ಉದ್ಯೋಗಿಗಳು ಅನುಕ್ರಮವಾಗಿ ಮೂಲವೇತನದ ಶೇ.9 ಮತ್ತು ಶೇ.6ರಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ.
►ಬ್ರೂನಿ
ಸಂಪೂರ್ಣವಾಗಿ ದೊರೆಯ ಆಡಳಿತದಲ್ಲಿದ್ದರೂ ತನ್ನ ಪ್ರಜೆಗಳ ಬಗ್ಗೆ ಉದಾರವಾಗಿರುವ ಈ ದೇಶವು ಅವರ ಮೇಲೆ ವ್ಯಕ್ತಿಗತ ಆದಾಯ ತೆರಿಗೆಯನ್ನು ಹೇರಿಲ್ಲ. ಆದರೆ ಕಾರ್ಪೊರೇಟ್ ಆದಾಯಗಳ ಮೇಲೆ ಶೇ.18.5 ತೆರಿಗೆಯನ್ನು ಸಂಗ್ರಹಿಸುತ್ತಿದೆ. ಜೊತೆಗೆ ಆಸ್ತಿ ತೆರಿಗೆ ಮತ್ತು ವಾಹನ ತೆರಿಗೆಯಂತಹ ಇತರ ನೇರ ತೆರಿಗೆಗಳ ಆದಾಯವನ್ನೂ ಹೊಂದಿದೆ.
►ಕುವೈತ್
ವಿಶ್ವದಲ್ಲಿಯ ತೈಲಸಂಪತ್ತಿನ ಶೇ.6ರಷ್ಟು ಕುವೈತ್‌ನ ಗರ್ಭದಲ್ಲಿಯೇ ಅಡಗಿದೆ. ಹೀಗಾಗಿ ಅದು ತೈಲ ಆಧಾರಿತ ಆರ್ಥಿಕತೆಯಾಗಿರುವುದ ರಲ್ಲಿ ಅಚ್ಚರಿಯೇನಿಲ್ಲ. ಸರಕಾರದ ಆದಾಯದಲ್ಲಿ ಶೇ.90ರಷ್ಟು ತೈಲಮಾರಾಟದಿಂದಲೇ ಬರುತ್ತದೆ. ಹೀಗಾಗಿ ಅದು ತೆರಿಗೆಮುಕ್ತ ರಾಷ್ಟ್ರವಾಗಿರಲು ಸಾಧ್ಯವಾಗಿದೆ. ವ್ಯಾಟ್, ಕಾರ್ಪೊರೇಟ್ ತೆರಿಗೆ ಅಥವಾ ವ್ಯಕ್ತಿಗತ ಆದಾಯ ತೆರಿಗೆ ಇವು ಯಾವುದರ ರಗಳೆಯೂ ಇಲ್ಲಿಯ ಪ್ರಜೆಗಳಿಗಿಲ್ಲ. ಆದರೆ ವಿದೇಶಿ ಕಂಪನಿಗಳ ಕಾರ್ಪೊರೇಟ್ ಆದಾಯದ ಮೇಲೆ ಶೇ.15ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ.
►ಓಮನ್
ತೈಲಸಮೃದ್ಧ ಓಮನ್‌ಯಾವುದೇ ವೈಯಕ್ತಿಕ ಆದಾಯ ತೆರಿಗೆಯನ್ನು ವಿಧಿಸುತ್ತಿಲ್ಲ. ಆದರೆ ಶೇ.55ರಷ್ಟು ತೆರಿಗೆಯನ್ನು ಪಾವತಿಸುತ್ತಿರುವ ತೈಲ ಮಾರಾಟ ಕಂಪನಿಗಳನ್ನು ಹೊರತುಪಡಿಸಿ ಇತರೆಲ್ಲ ಉದ್ಯಮ ಸಂಸ್ಥೆಗಳಿಂದ ಶೇ.15ರಷ್ಟು ಕಾರ್ಪೊರೇಟ್ ತೆರಿಗೆಯನ್ನು ಸಂಗ್ರಹಿಸು ತ್ತಿದೆ. ನೋಂದಾಯಿತ ಬಂಡವಾಳ 50,000 ಓಮನ್ ರಿಯಾಲ್ ಗಳಿಗಿಂತ ಕಡಿಮೆಯಿರುವ ಕಂಪನಿಗಳಿಗೆ ಅದು ಕೇವಲ ಶೇ.3ರಷ್ಟು ತೆರಿಗೆಯನ್ನು ವಿಧಿಸುತ್ತಿದೆ.
►ಕತಾರ್
ಕತಾರ್ ತನ್ನ ಪ್ರಜೆಗಳಿಗೆ ಯಾವುದೇ ಆದಾಯ ತೆರಿಗೆಯನ್ನು ವಿಧಿಸಿಲ್ಲ. ಕಂಪನಿಗಳು ಶೇ.10 ಕಾರ್ಪೊರೇಟ್ ತೆರಿಗೆಯನ್ನು ಪಾವತಿಸಬೇಕಾಗು ತ್ತದೆ. ಅನಿಲ ಮತ್ತು ತೈಲಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳು ಶೇ.35 ತೆರಿಗೆಯನ್ನು ಪಾವತಿಸುತ್ತಿವೆ.
►ಸೌದಿ ಅರೇಬಿಯಾ
ವಿಸ್ತೀರ್ಣದಲ್ಲಿ ಎರಡನೇ ಅತ್ಯಂತ ದೊಡ್ಡ ಅರಬ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಕೂಡ ಉದ್ಯೋಗದ ಮೂಲಕ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಿಲ್ಲ. ಸೌದಿಯೇತರರ ಪಾಲಿನ ಕಾರ್ಪೊರೇಟ್ ಅಥವಾ ಉದ್ಯಮ ಆದಾಯದ ಮೇಲೆ ಶೇ.20ರಷ್ಟು ತೆರಿಗೆಯನ್ನು ನಿಗದಿಗೊಳಿಸಲಾಗಿದೆ. ಆದರೆ ಸೌದಿ ಪಾಲುದಾರರು ಕೇವಲ ಶೇ.2.5ರಷ್ಟು ಱ ಝಕಾತ್ ೞನೀಡಿದರೆ ಸಾಕು. ನೈಸರ್ಗಿಕ ಅನಿಲ ಮತ್ತು ತೈಲವನ್ನು ತೆಗೆಯುವ ಕಂಪನಿಗಳು ಅನುಕ್ರಮವಾಗಿ ಶೇ.30 ಮತ್ತು ಶೇ.85ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
►ಸಂಯುಕ್ತ ಅರಬ್ ಸಂಸ್ಥಾನಗಳು(ಯುಎಇ)
ಏಳು ಸಂಸ್ಥಾನಗಳ ಒಕ್ಕೂಟವಾಗಿರುವ ಯುಎಇ ಕೊಲ್ಲಿಯಲ್ಲಿನ ಅತ್ಯಂತ ವೈವಿಧ್ಯಮಯ ಆರ್ಥಿಕತೆಗಳಲ್ಲೊಂದಾಗಿದ್ದು ತನ್ನ ಆದಾಯದ ಶೇ.30ರಷ್ಟಕ್ಕಾಗಿ ಮಾತ್ರ ತೈಲ ಮತ್ತು ಅನಿಲವನ್ನು ನೆಚ್ಚಿಕೊಂಡಿದೆ. ತೈಲ ಮತ್ತು ಅನಿಲ ಕ್ಷೇತ್ರ ಹಾಗೂ ಹಣಕಾಸು ಸೇವೆಗಳಿಗೆ ಹೊರತುಪಡಿಸಿದರೆ ಇತರ ಯಾವುದೇ ವೈಯಕ್ತಿಕ ಆದಾಯ ತೆರಿಗೆ ಅಥವಾ ಕಾರ್ಪೊರೇಟ್ ತೆರಿಗೆ ಈ ದೇಶದಲ್ಲಿಲ್ಲ. ವಿದೇಶಿ ಬ್ಯಾಂಕುಗಳ ಶಾಖೆಗಳು ಶೇ.20 ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ತೈಲ ಕಂಪನಿಗಳಿಗೆ ಶೇ.55 ತೆರಿಗೆಯನ್ನು ವಿಧಿಸಲಾಗಿದೆ.
►ಬರ್ಮುಡಾ
ಇದು ನಿಖರವಾಗಿ ಒಂದು ದೇಶವಲ್ಲ, ಆದರೆ ಬ್ರಿಟನ್‌ನ ಒಂದು ಸ್ವಾಯತ್ತ ಪ್ರದೇಶವಾಗಿದೆ. ಅದರ ಆರ್ಥಿಕತೆಯು ತನ್ನ ನೆಲದಲ್ಲಿ ಹಣಕಾಸು ಸೇವಾ ಕಂಪನಿಗಳು ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಪ್ರಮುಖವಾಗಿ ಅವಲಂಬಿಸಿದೆ. ಬರ್ಮುಡಾ ಬಹುತೇಕ ತೆರಿಗೆ ಮುಕ್ತವಾಗಿದ್ದು, ಕಾರ್ಪೊರೇಟ್ ಅಥವಾ ವ್ಯಕ್ತಿಗತ ಆದಾಯದ ಮೇಲೆ ಯಾವುದೇ ತೆರಿಗೆಯಿಲ್ಲ. ಆದರೆ ಉದ್ಯೋಗಿಗೆ ಪಾವತಿಸಿದ ಒಟ್ಟು ವೇತನ ಮತ್ತು ಇತರ ಸೌಲಭ್ಯಗಳ ಮೇಲೆ ಕಂಪನಿಗಳಿಗೆ ಶೇ.15.5 ಪೇರೋಲ್ ತೆರಿಗೆಯನ್ನು ವಿಧಿಸಲಾಗಿದೆ.
►ಕೇಮನ್ ದ್ವೀಪಸಮೂಹ
ಉತ್ತರ ಅಮೆರಿಕ ಮಹಾದ್ವೀಪದ ಕೆರಿಬಿಯನ್ ವಲಯದಲ್ಲಿರುವ ಕೇಮನ್ ದ್ವೀಪಸಮೂಹವು ಬ್ರಿಟನ್‌ನ ಇನ್ನೊಂದು ಸಾಗರೋತ್ತರ ಸ್ವಾಯತ್ತ ಪ್ರದೇಶವಾಗಿದ್ದು, ತೆರಿಗೆಮುಕ್ತವಾಗಿದೆ. ರಿಯಲ್ ಎಸ್ಟೇಟ್ ವರ್ಗಾವಣೆಯ ಮೇಲೆ ಸ್ಟಾಂಪ್ ಸುಂಕವನ್ನು ಹೊರತುಪಡಿಸಿದರೆ ಇತರ ಯಾವುದೇ ತೆರಿಗೆಯನ್ನು ಇಲ್ಲಿ ಹೇರಲಾಗಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ