ಭಾನುವಾರ, ಏಪ್ರಿಲ್ 1, 2018

ಯೂರಿಯಾ ಸಬ್ಸಿಡಿ ಯೋಜನೆ ಮುಂದುವರಿಕೆಗೆ ಸಿಸಿಇಎ ಒಪ್ಪಿಗೆ 

ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ (ಸಿಸಿಇಎ) ಯೂರಿಯಾ ಸಬ್ಸಿಡಿ ಯೋಜನೆಯನ್ನು ಮುಂದುವವರಿಸಲು ಒಪ್ಪಿಗೆ ನೀಡಿದೆ. ಸಮಿತಿಯ ಒಪ್ಪಿಗೆಯಿಂದಾಗಿ ಈ ಯೋಜನೆ 2017ರಿಂದ 2020ರ ವರೆಗೆ ಮುಂದುವರಿಯಲಿದೆ. ಇದರ ಜತೆಗೆ ರಸಗೊಬ್ಬರ ಸಬ್ಸಿಡಿಯ ವಿತರಣೆಗೆ ನೇರ ಪ್ರಯೋಜನ ವರ್ಗಾವಣೆ ಯೋಜನೆ ಮುಂದುವರಿಯಲಿದೆ. ಈ ಕುರಿತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ರಸಗೊಬ್ಬರ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮಿತಿ ಒಪ್ಪಿಗೆ ನೀಡಿದೆ. 

ರಸಗೊಬ್ಬರ ವಲಯದಲ್ಲಿ ಡಿಬಿಟಿ 

ರಸಗೊಬ್ಬರ ಇಲಾಖೆಯು ಡಿಬಿಟಿ ಯೋಜನೆಯನ್ನು ರಸಗೊಬ್ಬರ ವಲಯದಲ್ಲಿ ರಾಷ್ಟ್ರವ್ಯಾಪಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಡಿಬಿಟಿ ಯೋಜನೆ ಜಾರಿಗೆ ಬಂದ ಬಳಿಕ ಶೇಕಡ 100ರಷ್ಟು ಹಣವನ್ನು ರಸಗೊಬ್ಬರ ಕಂಪನಿಗಳಿಗೆ ರೈತರು ಯೂರಿಯಾ ಖರೀದಿಸುವಾಗ ವರ್ಗಾವಣೆಯಾಗಲಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಇದನ್ನು ಮಾರಾಟ ಮಾಡುವಾಗ ಸಬ್ಸಿಡಿ ಮೊತ್ತ ನೇರವಾಗಿ ಕಂಪನಿಗಳಿಗೆ ಪಾವತಿಯಾಗುತ್ತದೆ. ರಸಗೊಬ್ಬರ ವಲಯದಲ್ಲಿ ಸಬ್ಸಿಡಿಯ ಡಿಬಿಟಿ ಯೋಜನೆಯು ಇತರ ಯೋಜನೆಗಳಿಗೆ ಆರಂಭಿಸಿರುವ ಸಾಮಾನ್ಯ ಡಿಬಿಟಿ ಯೋಜನೆಗಿಂತ ತುಸು ಭಿನ್ನವಾಗಿದೆ. ಈ ಡಿಬಿಟಿ ಯೋಜನೆಯಡಿ, ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವಿತರಿಸುವ ಬದಲು ರಸಗೊಬ್ಬರ ಕಂಪನಿಗಳಿಗೆ ವಿತರಿಸಲಾಗುತ್ತದೆ. ಚಿಲ್ಲರೆ ಮಾರಾಟಗಾರರು ರೈತರಿಗೆ ಯೂರಿಯಾ ಮಾರಾಟ ಮಾಡುವ ಅವಧಿಯಲ್ಲಿ ಕಂಪನಿಗಳಿಗೆ ಸಬ್ಸಿಡಿ ಮೊತ್ತ ನೇರವಾಗಿ ವರ್ಗಾವಣೆಯಾಗುತ್ತದೆ. ಸಬ್ಸಿಸಿಡಯನ್ನು ವೆಬ್ ಆಧರಿತ ಆನ್‍ಲೈನ್ ಸಮಗ್ರ ರಸಗೊಬ್ಬರ ನಿರ್ವಹಣೆ ವ್ಯವಸ್ಥೆ (IFMS) ಮೂಲಕ ರಸಗೊಬ್ಬರ ಕಂಪನಿಗಳು ಸೃಷ್ಟಿಸುವ ಕ್ಲೇಮ್‍ಗಳನ್ನು ಸಲ್ಲಿಸಿದ ಬಳಿಕ ಸಬ್ಸಿಡಿ ಈ ಕಂಪನಿಗಳಿಗೆ ಬಿಡುಗಡೆಯಾಗುತ್ತದೆ. ಯೂರಿಯಾ ಸಬ್ಸಿಡಿಯು ಕೇಂದ್ರ ವಲಯದ ಯೋಜನೆಯ ಭಾಗವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಆರ್ಥಿಕ ನೆರವು ಒದಗಿಸುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ