ಭಾನುವಾರ, ಏಪ್ರಿಲ್ 1, 2018

ಮರಣ ದಂಡನೆ ಉಳಿಯಬೇಕು 

ದೇಶದಲ್ಲಿ ಮರಣದಂಡನೆ ಉಳಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೋರಿದ್ದು, ಇದುವರೆಗೆ 14 ರಾಜ್ಯಗಳ ಪೈಕಿ 12 ರಾಜ್ಯಗಳು, ಮರಣ ದಂಡನೆ ಉಳಿದುಕೊಳ್ಳಬೇಕು ಎಂಬ ಅಭಿಪ್ರಾಯ ನೀಡಿವೆ. ಇದು ಘನಘೋರ ಅಪರಾಧಗಳಾದ ಹತ್ಯೆ ಮತ್ತು ಅತ್ಯಾಚಾರದಂಥ ಪ್ರಕರಣಗಳಿಂದ ಆರೋಪಿಗಳು ದೂರ ಇರುವಂತೆ ಮಾಡುವ ಸಲುವಾಗಿ ಅನಿವಾರ್ಯ ಎನ್ನುವುದು ಈ ರಾಜ್ಯಗಳ ವಾದ. ಭಾರತದ ಕಾನೂನು ಆಯೋಗದ ಶಿಫಾರಸ್ಸಿನ ಮೇರೆಗೆ ದೇಶದಲ್ಲಿ ಮರಣ ದಂಡನೆಯನ್ನು ರದ್ದು ಮಾಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿ, ಈ ಬಗ್ಗೆ ಅಭಿಪ್ರಾಯ ಆಹ್ವಾನಿಸಿತ್ತು. ಮರಣ ದಂಡನೆ ರದ್ದುಪಡಿಸುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ ರಾಜ್ಯಗಳೆಂದರೆ, ಗುಜರಾತ್, ಛತ್ತೀಸ್‍ಗಢ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಬಿಹಾರ, ತಮಿಳುನಾಡು ಹಾಗೂ ದೆಹಲಿ. ಕೇವಲ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ತ್ರಿಪುರಾ, ಈ ಪದ್ಧತಿಯನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿವೆ. 2013ರಲ್ಲಿ ಸುಪ್ರೀಂಕೋರ್ಟ್, ಭಾರತದ ಕಾನೂನು ಆಯೋಗಕ್ಕೆ ಸೂಚನೆ ನೀಡಿ, ಮರಣ ದಂಡನೆಯು ಅಪರಾಧದಿಂದ ವಿಮುಖರಾಗುವಂತೆ ಮಾಡುತ್ತದೆಯೇ ಅಥವಾ ಇದು ನ್ಯಾಯ ಸಂಭಾವನೆಯಾಗುತ್ತದೆಯೇ ಅಥವಾ ಅಸಾಮಥ್ರ್ಯದ ಗುರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಆದೇಶಿಸಿತ್ತು. 

2015ರ ವರದಿಯಲ್ಲಿ ಭಾರತದ ಕಾನೂನು ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎ.ಪಿ.ಶಾ ಅವರು ಉಗ್ರಗಾಮಿ ಚಟುವಟಿಕೆಗಳನ್ನು ಹೊರತುಪಡಿಸಿದ ಅಪರಾಧ ಪ್ರಕರಣಗಳಲ್ಲಿ ಮತ್ತು ದೇಶದ ವಿರುದ್ಧ ಸಮರ ಸಾರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ ಮರಣ ದಂಡನೆಯನ್ನು ರದ್ದುಪಡಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಕಾನೂನು ಆಯೋಗದ ವರದಿಯ ಪ್ರಕಾರ, ಚೀನಾ, ಸೌದಿ ಅರೇಬಿಯಾ, ಇರಾನ್ ಮತ್ತು ಇರಾಕ್ ದೇಶಗಳ ಸಾಲಿನಲ್ಲಿ ಭಾರತವೂ ಇದ್ದು, ವಿಶ್ವದ ಕೆಲವೇ ದೇಶಗಳಲ್ಲಿ ಇದೀಗ ಮರಣ ದಂಡನೆ ಶಿಕ್ಷೆ ಜಾರಿಯಲ್ಲಿದೆ. 2014ರ ಕೊನೆಯ ವೇಳೆಗೆ 98 ದೇಶಗಳು ಮರಣ ದಂಡನೆಯನ್ನು ರದ್ದುಪಡಿಸಿವೆ. 

=========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ