ಮಂಗಳವಾರ, ಫೆಬ್ರವರಿ 13, 2018

ಸಿಎಂಗಳ ಆಸ್ತಿ: ಚಂದ್ರಬಾಬು ನಾಯ್ಡು ಕುಬೇರ, ಮಾಣಿಕ್ ಸರ್ಕಾರ್ ಕುಚೇಲ

ಸಿಎಂಗಳ ಆಸ್ತಿ: ಚಂದ್ರಬಾಬು ನಾಯ್ಡು ಕುಬೇರ, ಮಾಣಿಕ್ ಸರ್ಕಾರ್ ಕುಚೇಲ
=================
ಹೊಸದಿಲ್ಲಿ: ದೇಶದಲ್ಲೇ ಅತಿ ಶ್ರೀಮಂತ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡುಪಾತ್ರರಾಗಿದ್ದಾರೆ. ಅವರ ಆಸ್ತಿಗಳ ಒಟ್ಟು ಮೌಲ್ಯ 177 ಕೋಟಿ ರೂ.ಗಳಾಗಿವೆ. 
=============
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು (129 ಕೋಟಿ ರೂ) ಮತ್ತು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ (48 ಕೋಟಿ ರೂ) ಕೂಡ ಈ ಸಾಲಿನಲ್ಲಿದ್ದಾರೆ.
==============
29 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸ್ವಯಂ ಘೋಷಿತ ಆಸ್ತಿ ವಿವರಗಳ ವಿಶ್ಲೇಷಣೆಯಿಂದ ಈ ಆಸಕ್ತಿಕರ ಮಾಹಿತಿ ಹೊರಬಿದ್ದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆಸ್ತಿ ಮೌಲ್ಯ ಕೇವಲ 30 ಲಕ್ಷ ರೂ ಎಂದು ಘೋಷಿಸಿಕೊಂಡಿದ್ದಾರೆ. ಅವರ ಬಳಿ ಯಾವುದೇ ಸ್ಥಿರಾಸ್ತಿಗಳಿಲ್ಲವಂತೆ. 
============
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ವಿರುದ್ಧ ಅತ್ಯಧಿಕ (22) ಕೇಸುಗಳು ದಾಖಲಾಗಿವೆ. ಇವುಗಳ ಪೈಕಿ 3 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. 
=============
ಕೇಸುಗಳ ವಿಚಾರದಲ್ಲಿ ಎರಡನೇ ಸ್ಥಾನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮೇಲೆ 11 ಕ್ರಿಮಿನಲ್‌ ಕೇಸುಗಳಿವೆ ಎಂದು ಸ್ವತಃ ಅವರೇ ಅಫಿದವಿತ್‌ ಸಲ್ಲಿಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮೇಲೆ 10 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. 
===============
ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಈ ವಿಶ್ಲೇಷಣೆ ನಡೆಸಿದೆ. ಒಟ್ಟು 31 ಮುಖ್ಯಮಂತ್ರಿಗಳ ಪೈಕಿ 20 ಮಂದಿ ಸ್ವಚ್ಛ ದಾಖಲೆಗಳನ್ನು ಹೊಂದಿದ್ದಾರೆ. 11 ಮುಖ್ಯಮಂತ್ರಿಗಳು (ಶೇ 35 ಮಂದಿ) ತಮ್ಮ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ. 8 ಮಂದಿಯ (ಶೇ 26) ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್ ಕೇಸುಗಳಿವೆ. 
==============
ಪ್ರತಿ ಮುಖ್ಯಮಂತ್ರಿ ಸರಾಸರಿ ಆಸ್ತಿ ಮೌಲ್ಯ 16 ಕೋಟಿ ರೂ.ಗಳಿಗಿಂತ ಸ್ವಲ್ಪ ಹೆಚ್ಚಾಗಿದ್ದರೆ, 31 ಸಿಎಂಗಳ ಪೈಕಿ 25 ಮಂದಿ ಕೋಟ್ಯಾಧೀಶರಾಗಿದ್ದಾರೆ. ತ್ರಿಪುರಾದ ಸಿಪಿಐ(ಎಂ) ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‌ ಕೇವಲ 26 ಲಕ್ಷ ರೂ ಆಸ್ತಿಯೊಂದಿಗೆ ಅತ್ಯಂತ ಬಡವರೆಂದು ಗುರುತಿಸಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ 30 ಲಕ್ಷ, ಜಮ್ಮು ಕಾಶ್ಮೀರದ ಪಿಡಿಪಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ 55 ಲಕ್ಷ ರೂ ಆಸ್ತಿ ಘೋಷಿಸಿಕೊಂಡಿದ್ದಾರೆ. 
===============
ಶೇ 55ಕ್ಕೂ ಹೆಚ್ಚು ಸಿಎಂಗಳು 1 ಕೋಟಿಯಿಂದ 10 ಕೋಟಿ ವರೆಗೆ ಆಸ್ತಿ ಹೊಂದಿದ್ದಾರೆ. ಶೇ 19ರಷ್ಟು ಸಿಎಂಗಳು 1 ಕೋಟಿಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ. ಶೇ 7 ಮಂದಿ 100 ಕೋಟಿಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದಾರೆ. 
===============
ಶೈಕ್ಷಣಿಕ ದಾಖಲೆಗಳನ್ನು ಗಮನಿಸಿದರೆ, ಶೇ 39ರಷ್ಟು ಮುಖ್ಯಮಂತ್ರಿಗಳು ಪದವೀಧರರಾಗಿದ್ದರೆ, ಶೇ 32 ಸಿಎಂಗಳು ವೃತ್ತಿಪರರಾಗಿದ್ದಾರೆ. ಶೇ 16 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದು, ಶೇ 10 ಮಂದಿ ಕೇವಲ ಹೈಸ್ಕೂಲ್‌ ಪಾಸಾಗಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿ ಪಿ.ಕೆ ಚಾಮ್ಲಿಂಗ್‌ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. 
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ