ಇಂದು ರಾಷ್ಟ್ರೀಯ ಅಂಗಾಂಗ ದಾನಿಗಳ ದಿನ
==========
ಅಂಗಾಂಗ ದಾನ ಪಡೆಯಲು ಕಾಯುತ್ತಿವೆ 3,000 ಜೀವಗಳು
==============
ಒಬ್ಬ ವ್ಯಕ್ತಿ ಸತ್ತ ಬಳಿಕವೂ ಜೀವಂತವಾಗಿರಲು ಅಂಗಾಂಗ ದಾನದಿಂದ ಮಾತ್ರ ಸಾಧ್ಯ! ಮೊದಲೆಲ್ಲ ವ್ಯಕ್ತಿ ಮೃತಪಟ್ಟ ಬಳಿಕ ಆತನ ದೇಹ ಸಂಪೂರ್ಣ ನಿರುಪಯುಕ್ತ ಎಂದೇ ಭಾವಿಸಲಾಗುತ್ತಿತ್ತು. ಈಗ ಹಾಗಲ್ಲ. ಸಾವಿನ ನಂತರವೂ ಬೇರೆಯವರಿಗೆ ಬದುಕು ಕೊಡುವ ಭಾಗ್ಯವನ್ನು ಆಧುನಿಕ ಆವಿಷ್ಕಾರಗಳು ಒದಗಿಸಿಕೊಟ್ಟಿವೆ. ಅಂಗಾಂಗ ದಾನ ಪವಿತ್ರ ಕಾರ್ಯವೆಂದೇ ಬಿಂಬಿತವಾಗುತ್ತಿದೆ.
=========
ಏಕೆಂದರೆ ರಾಜ್ಯದಲ್ಲಿ ಒಟ್ಟಾರೆ 3 ಸಾವಿರ ಮಂದಿಗೆ ವಿವಿಧ ಅಂಗಗಳ ಕಸಿಯ ಅಗತ್ಯವಿದೆ. ಮೂತ್ರಪಿಂಡ ಕಸಿಗಾಗಿಯೇ ಅಂದಾಜು 2 ಸಾವಿರ ರೋಗಿಗಳು ಕಾಯುತ್ತಿದ್ದಾರೆ. ಅಂದಾಜು 1 ಸಾವಿರ ರೋಗಿಗಳಿಗೆ ಹೃದಯ, ಶ್ವಾಸಕೋಶ ಹಾಗೂ ಪಿತ್ತಜನಕಾಂಗಗಳ ಅವಶ್ಯಕತೆ ಇದೆ.
ದಿನಾಚರಣೆ ಹಿನ್ನೆಲೆ
===========
ಫೆ.14 ರಾಷ್ಟ್ರೀಯ ಅಂಗಾಂಗ ದಾನಿಗಳ ದಿನವೂ ಹೌದು. 1998ರಲ್ಲಿ ಯು.ಎಸ್. ಆರೋಗ್ಯಸೇವೆಗಳ ವಿಭಾಗವು ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಫೆ.14ನ್ನು ರಾಷ್ಟ್ರೀಯ ಅಂಗದಾನಿಗಳ ದಿನ ಎಂದು ಘೋಷಿಸಿದೆ.
ಅಂಗದಾನಿಗಳಾರು?
===========
# 5 ವರ್ಷಕ್ಕಿಂತ ಮೇಲ್ಪಟ್ಟವರು, 60 ವರ್ಷ ವಯೋಮಿತಿಯ ಒಳಗಿನವರು ದಾನಿಯಾಗಲು ಸಾಧ್ಯ.
# 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಂದೆ-ತಾಯಿಗಳ ಒಪ್ಪಿಗೆ ಪತ್ರವನ್ನು ಪಡೆಯಬೇಕು.
# ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಬೇಕು.
# ಯಾವುದೇ ರೋಗದಿಂದ ನರಳುತ್ತಿರಬಾರದು.
# ದಾನಿಯಾಗಿ ನೋಂದಣಿ ಮಾಡಿಕೊಂಡವರು ಪದೇ ಪದೇ ಆರೋಗ್ಯ ತಪಾಸಣೆ ಮಾಡಿಸಬೇಕಿಲ್ಲ.
# ದಾನಿಯಾಗಿರುವ ಬಗ್ಗೆ ಕುಟುಂಬಕ್ಕೆ ಮೊದಲೇ ಮಾಹಿತಿ ನೀಡುವುದು ಉತ್ತಮ.
ಮಿದುಳು ನಿಷ್ಕ್ರಿಯದ ಬಳಿಕ ಯಾವೆಲ್ಲ ಅಂಗಗಳ ದಾನ ಸಾಧ್ಯ?
===========
ಹೃದಯ, ಶ್ವಾಸಕೋಶಗಳು, ಕಣ್ಣು, ಕಿಡ್ನಿ, ಯಕೃತ್, ಮೆದೊಜೀರಕ ಗ್ರಂಥಿ, ಸಣ್ಣ ಕರುಳು, ಗಂಟಲಿನ ದ್ವನಿ ಪೆಟ್ಟಿಗೆ, ಗರ್ಭಕೋಶ, ಅಂಡಾಶಯ, ಮಧ್ಯ ಕಿವಿ, ಮೃದು ಮೂಳೆ, ನರ, ರಕ್ತನಾಳಗಳನ್ನು ದಾನವಾಗಿ ನೀಡಬಹುದು.
ಮಿದುಳು ನಿಷ್ಕ್ರಿಯ ಎಂದರೇನು?
=============
ಅಫಘಾತ ಅಥವಾ ಮಿದುಳಿನ ಆಂತರಿಕ ರಕ್ತಸ್ರಾವ ಇತ್ಯಾದಿಗಳಿಂದ ಮಿದುಳು ತನ್ನ ಕೆಲಸ ನಿಲ್ಲಿಸಿದರೆ ಅದಕ್ಕೆ ಮಿದುಳು ನಿಷ್ಕ್ರಿಯ ಸ್ಥಿತಿ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ರೋಗಿಯ ಇತರ ಅಂಗಗಳು ಕೆಲಸ ಮಾಡುತ್ತಲೇ ಇರುತ್ತವೆೆ. ವೈದ್ಯರು ಬ್ರೇನ್ಡೆಡ್ ಎಂದು ಘೋಷಿಸಿದ ನಂತರ ಪಾಲಕರಿಗೆ ಅಂಗಾಂಗ ದಾನ ಕುರಿತು ಮಾಹಿತಿ ನೀಡಿ, ಅವರ ಒಪ್ಪಿಗೆ ಪಡೆದು, ದಾನಕ್ಕೆ ಯೋಗ್ಯವಾದ ಅಂಗಗಳನ್ನು ದೇಹದಿಂದ ಹೊರತೆಗೆದು, ನಿಗದಿತ ಸಮಯದೊಳಗಾಗಿ ಮತ್ತೊಬ್ಬ ರೋಗಿಗೆ ಕಸಿ ಮಾಡಲಾಗುತ್ತದೆ.
ದಾನಿಗಳಾಗುವುದು ಹೇಗೆ?
============
ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆ ಅಂಗಾಂಗ ದಾನದ ನಿರ್ವಹಣೆಗಾಗಿ ಜೀವಸಾರ್ಥಕತೆ ವೆಬ್ ಪೋರ್ಟಲ್ ಸ್ಥಾಪಿಸಿದೆ. ಆಧಾರ್ ಕಾರ್ಡ್ ನಂಬರ್ ನಮೂದಿಸಿ ದಾನಿಯಾಗಿ ನೋಂದಣಿ ಮಾಡಬಹುದು. ಆನ್ಲೈನ್ನಲ್ಲಿ ವೆಬ್ಪೋರ್ಟಲ್ ಕೇಳುವ ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ, ಡೋನರ್ ಕಾರ್ಡ್, ದಾನಿಯ ಸಂಖ್ಯೆ ಇತ್ಯಾದಿ ಮಾಹಿತಿಯುಳ್ಳ ವಿವರ ಮೊಬೈಲ್ ಹಾಗೂ ಇ-ಮೇಲ್ ವಿಳಾಸಕ್ಕೆ ಬರುತ್ತದೆ. ದಾನಿಯಾಗಿರುವ ವಿಚಾರ ಕುಟುಂಬಕ್ಕೆ ತಿಳಿಸಿ, ಸಂಪರ್ಕ ಸಂಖ್ಯೆ ನಮೂದಿಸುವ ವ್ಯವಸ್ಥೆ ಮಾಡಲಾಗಿದೆ.
=============
ಪ್ರಸ್ತುತ ರಾಜ್ಯದಲ್ಲಿ ಅಂದಾಜು 3 ಸಾವಿರ ಮಂದಿ ವಿವಿಧ ಅಂಗಾಂಗ ಕಸಿಗಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. 2017ರಲ್ಲಿ 68 ಮಂದಿ ಅಂಗಾಂಗ ದಾನ ಮಾಡಿದ್ದು, ವರ್ಷದಿಂದ ವರ್ಷಕ್ಕೆ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಆನ್ಲೈನ್ ಜೀವಸಾರ್ಥಕತೆ ಅಂತರ್ಜಾಲ ತಾಣ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ
| ಮಂಜುಳಾ ಜೀವಸಾರ್ಥಕತೆಯ ಮುಖ್ಯ ಕಸಿ ಸಂಯೋಜಕಿ
===========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ