ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) 2017ನೇ ಸಾಲಿನ ಪ್ರತಿಷ್ಠಿತ ಕೊಚೋನ್ ಪ್ರಶಸ್ತಿಗೆ ಪಾತ್ರವಾಗಿದೆ. ಕ್ಷಯರೋಗದ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಶ್ರೇಷ್ಠತೆಯ ಸಂಪ್ರದಾಯವನ್ನು ನಿರ್ಮಿಸಿರುವುದಕ್ಕಾಗಿ ಈ ಪ್ರಶಸ್ತಿ ಸಂದಿದೆ. ಒಟ್ಟು 18 ನಾಮನಿರ್ದೇಶನಗಳ ಪೈಕಿ ICMR ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದೆ. ಭಾರತದಲ್ಲಿ ಕ್ಷಯರೋಗದ ಸಂಶೋಧನೆಯ ಒಕ್ಕೂಟವನ್ನು ರಚಿಸಿ, ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ವೇಗವರ್ಧನೆಗೆ ನಡೆಸಿದ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಒಕ್ಕೂಟವು ಪ್ರಮುಖವಾಗಿ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯ ನಿರ್ವಹಿಸಲಿದ್ದು, ಕ್ಷಯರೋಗಕ್ಕೆ ಪಾಯಿಂಟ್ ಆಫ್ ಕೇರ್ ರೋಗಪತ್ತೆ ವ್ಯವಸ್ಥೆ, ಅಲ್ಪಾವಧಿ ಚಿಕಿತ್ಸಾ ವ್ಯವಸ್ಥೆ ಮತ್ತು ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುವುದು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕುರಿತು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಭಾರತದ ಅತ್ಯುನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಗಿದ್ದು, ಇದು ಜೈವಿಕ ವೈದ್ಯಕೀಯ ಸಂಶೋಧನೆಯನ್ನು ರೂಪುಗೊಳಿಸುವ, ಸಮನ್ವಯಗೊಳಿಸುವ ಮತ್ತು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಇದು 1911ರಲ್ಲಿ ಆರಂಭವಾಗಿದ್ದು, ಆರಂಭದಲ್ಲಿ ಇದನ್ನು ಇಂಡಿಯನ್ ರೀಸರ್ಚ್ ಫಂಡ್ ಅಸೋಸಿಯೇಶನ್ (IRFA) ಎಂದು ಕರೆಯಲಾಗುತ್ತಿತ್ತು. ಇದು ವಿಶ್ವದ ಅತ್ಯಂತ ಹಳೆಯ ಹಾಗೂ ಅತಿದೊಡ್ಡ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿ ಈಗ ರೂಪುಗೋಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.
ಕೊಚೊನ್ ಪ್ರಶಸ್ತಿ ಕುರಿತು.
================
> ಕೊಚೊನ್ ಪ್ರಶಸ್ತಿಯನ್ನು ವಾರ್ಷಿಕವಾಗಿ ಸ್ಟಾಪ್ ಟಿಬಿ ಪಾರ್ಟ್‍ನರ್‍ಶಿಪ್ ಎಂಬ ಸಂಘಟನೆ ನೀಡುತ್ತದೆ. ಕ್ಷಯರೋಗದ ನಿಯಂತ್ರಣದ ನಿಟ್ಟಿನಲ್ಲಿ ಗಣನೀಯ ಸೇವೆ ನೀಡುವ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಕೊಚೋನ್ ಫೌಂಡೇಷನ್ ಎಂಬ ಲಾಭರಹಿತ ಪ್ರತಿಷ್ಠಾನ ಪ್ರತಿಷ್ಠಾಪಿಸಿದ್ದು, ಇದು ದಕ್ಷಿಣ ಕೊರಿಯಾದಲ್ಲಿ ನೋಂದಣಿಯಾದ ಸಂಸ್ಥೆಯಾಗಿದೆ. ಈ ಪ್ರಶಸ್ತಿಯು 65 ಸಾವಿರ ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ.
> ಈ ಪ್ರಶಸ್ತಿಯನ್ನು 2006ರಲ್ಲಿ ಆರಂಭಿಸಲಾಗಿದ್ದು, ಚೋಂಗ್ ಕುನ್ ಡಂಗ್ ಫಾರ್ಮಸ್ಯೂಟಿಕಲ್ ಕಾರ್ಪೊರೇಷನ್ ಮತ್ತು ಕೊಚೊನ್ ಫೌಂಡೇಷನ್‍ನ ಸಂಸ್ಥಾಪಕ ಅಧ್ಯಕ್ಷ ದಿವಂಗತ ಚಾಂಗ್ ಕುನ್ ಲೀ ಅವರ ಗೌರವಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ. ಇವರು ತಮ್ಮ ಜೀವಿತಾವಧಿಯುದ್ಧಕ್ಕೂ ಕ್ಷಯರೋಗ ತಡೆಗೆ ಕಡಿಮೆ ವೆಚ್ಚದ ಜೀವರಕ್ಷಕ ಆಂಟಿಬಯೋಟಿಕ್‍ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ