ಸೋಮವಾರ, ಫೆಬ್ರವರಿ 12, 2018

ಮಾಹಿತಿಗಾಗಿ

ಆರ್ಥಿಕ ನೀತಿಯ ಕ್ರಾಂತಿ ಎಫ್​ಡಿಐ
=================
ದೇಶದ ಆರ್ಥಿಕ ನೀತಿಗಳಲ್ಲಿ ಸಮಗ್ರ ಬದಲಾವಣೆಗಳಾಗುತ್ತಿದ್ದು, ಭಾರತವನ್ನು ಜಾಗತಿಕ ಹೂಡಿಕೆದಾರರ ಸ್ನೇಹಿಯಾಗಿಸಲು ಪ್ರಯತ್ನಗಳು ನಡೆದಿವೆ. ದೇಶದಲ್ಲಿ 1991ರ ಆರ್ಥಿಕ ಸುಧಾರಣೆಗಳೊಂದಿಗೆ ವಿದೇಶಿ ನೇರ ಹೂಡಿಕೆ (ಎಫ್​ಡಿಐ) ಆರಂಭವಾಯಿತಾದರೂ, ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಮಂತ್ರದೊಂದಿಗೆ ಖಾಸಗಿ ಹೂಡಿಕೆಯಲ್ಲಿ ಹೊಸ ಮನ್ವಂತರ ಆರಂಭವಾಗಿದೆ. 2016ರ ಆಗಸ್ಟ್​ನಲ್ಲಿ ಸುಮಾರು 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಫ್​ಡಿಐ ಮಿತಿ ಹೆಚ್ಚಿಸಲಾಗಿತ್ತು. ಇತ್ತೀಚೆಗಷ್ಟೇ, ಸಿಂಗಲ್ ಬ್ರ್ಯಾಂಡ್ ರಿಟೇಲ್ ವಲಯದಲ್ಲಿ ಶೇ.100ರಷ್ಟು ಎಫ್​ಡಿಐಗೆ ಅವಕಾಶ ನೀಡಲಾಗಿದೆ.
===============
ನಮ್ಮ ಆರ್ಥಿಕ ನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿದ್ದು, ದೇಶದಲ್ಲಿ ಹೂಡಿಕೆ ಮಾಡುವುದು ಹಿಂದೆಂದಿಗಿಂತಲೂ ಸುಲಭ. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಹೊಸ ಬಾಗಿಲೇ ತೆರೆದಿದೆ. ನಮ್ಮ ದೇಶಕ್ಕೆ ಬನ್ನಿ, ಕೆಲಸ ಮಾಡಿ, ಉತ್ಪಾದಿಸಿ, ನೀವು ಉತ್ಪಾದಿಸಿದ ವಸ್ತುಗಳನ್ನು ಪ್ರಪಂಚದ ಯಾವುದೇ ಮೂಲೆಗೆ ರಫ್ತು ಮಾಡಿ’. ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸುಮಾರು 3000 ಉದ್ಯಮಿಗಳನ್ನು ಭಾರತಕ್ಕೆ ಆಹ್ವಾನಿಸಿ, ಪ್ರಧಾನಿ ಮೋದಿ ಹೇಳಿದ ಉತ್ತೇಜಕ ಮಾತುಗಳಿವು. ಹತ್ತಾರು ಕ್ಷೇತ್ರಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡಿರುವ ಸರ್ಕಾರ, ಇತ್ತೀಚೆಗಷ್ಟೇ ಸಿಂಗಲ್ ಬ್ರ್ಯಾಂಡ್ ರಿಟೇಲ್ ವಲಯದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದೆ. ಈ ಬಾರಿ ಖಾಸಗಿ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಮತ್ತಷ್ಟು ವಲಯಗಳಿಗೆ ಶೇ.100 ಎಫ್​ಡಿಐಗೆ ಒಪ್ಪಿಗೆ ನೀಡುವ ನಿರೀಕ್ಷೆಗಳಿವೆ.
============
ಭಾರತಕ್ಕೆ ಎಫ್​ಡಿಐ ಅಗತ್ಯವೆಷ್ಟು?: 
==========
ಬಂಡವಾಳ ಕೊರತೆ ಹೊಂದಿರುವ ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆಯ ಅಗತ್ಯವಿದೆ. ಅಭಿವೃದ್ಧಿಶೀಲ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಹೂಡಿಕೆಗೆ ಪೂರಕ ಪರಿಸರವೂ ಇದೆ. ಇಲ್ಲಿನ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಹಾಗೂ ಅವುಗಳ ಉತ್ಪನ್ನಗಳನ್ನು ವಿಶ್ವಾದ್ಯಂತ ಪಸರಿಸಲೂ ವಿದೇಶಿ ಬಂಡವಾಳ ಪ್ರಮುಖ ಸಾಧನವಾಗಲಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶ ಸೃಷ್ಟಿಸಲು ಖಾಸಗಿ ಬಂಡವಾಳದ ಅವಶ್ಯಕತೆಯಂತೂ ಇದ್ದೇ ಇದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗಷ್ಟೇ ಅಲ್ಲ ಯೂರೋಪಿಯನ್ ಒಕ್ಕೂಟ, ಅಮೆರಿಕಗಳಂತಹ ಮುಂದುವರಿದ ದೇಶಗಳಿಗೂ ಎಫ್​ಡಿಐ ಅಗತ್ಯವಿದೆ. ಆದರೆ ಅಲ್ಲಿ ಅಗತ್ಯವಿರುವುದೇ ಬೇರೆ ಕಾರಣಕ್ಕೆ. ಅಲ್ಲಿನ ಹಣಕಾಸು ಸ್ವರೂಪವೇ ಬೇರೆ ಇದೆ. ಜತೆಗೆ, ಮುಕ್ತ ವ್ಯಾಪಾರ ಒಪ್ಪಂದಗಳು ಸಹ ವಿದೇಶಿ ಬಂಡವಾಳ ಸೆಳೆಯುವ ಪ್ರಮುಖ ಸಾಧನಗಳು
===========
ಮಾರಿಷಸ್​ನಿಂದ ಅತಿ ಹೆಚ್ಚು ಬಂಡವಾಳ :ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿರುವ ರಾಷ್ಟ್ರಗಳಲ್ಲಿ ಮಾರಿಷಸ್ ಪಾಲು ಅತಿ ಹೆಚ್ಚೆಂದು ಭಾರತೀಯ ರಿಸರ್ವ್ ಬ್ಯಾಂಕ್​ನ ವರದಿ ಹೇಳಿದೆ. ‘ವಿದೇಶಿ ಹಣಕಾಸಿನ ಹೊಣೆಗಾರಿಕೆಗಳು ಹಾಗೂ ಭಾರತೀಯ ನೇರ ಹೂಡಿಕೆ ಕಂಪನಿಗಳ ಆಸ್ತಿಗಳು’ ಎಂಬ ವಿಷಯದ ಕುರಿತು ಬಿಡುಗಡೆ ಮಾಡಲಾದ ವರದಿಯು ಎಫ್​ಡಿಐ ಬಗ್ಗೆ ಮಾಹಿತಿಯನ್ನು ನೀಡಿದೆ.
==============
ಮಾರಿಷಸ್ ಭಾರತದ ಮಾರುಕಟ್ಟೆ ಮೌಲ್ಯದ ಎಫ್​ಡಿಐನಲ್ಲಿ ಶೇ. 21.8ರಷ್ಟು ಪಾಲು ಹೊಂದಿದ್ದು, ಅಮೆರಿಕ, ಇಂಗ್ಲೆಂಡ್, ಸಿಂಗಾಪುರ ಮತ್ತು ಜಪಾನ್ ಶೇ.19ರಷ್ಟು ಪಾಲು ಹೊಂದುವ ಮೂಲಕ ನಂತರದ ಸ್ಥಾನಗಳಲ್ಲಿವೆ. ಉತ್ಪಾದನಾ ವಲಯವು ಎಫ್​ಡಿಐಗೆ ಅತಿ ಹೆಚ್ಚು ಕೊಡುಗೆ ನೀಡಿರುವ ಕ್ಷೇತ್ರವಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ, ಹಣಕಾಸು ಮತ್ತು ವಿಮೆ ಇತರ ಪ್ರಮುಖ ಕ್ಷೇತ್ರಗಳಾಗಿವೆ.
=============
ಲಾಭವೇನು? : 
===========
ಎಫ್​ಡಿಐನಿಂದ ಜಾಗತಿಕ ಆರ್ಥಿಕ ವೃದ್ಧಿ ಜತೆಗೆ ಬಂಡವಾಳ ಹೂಡಿಕೆದಾರರು ಹಾಗೂ ಹೂಡಿಕೆ ಸ್ವೀಕರಿಸಿದ ರಾಷ್ಟ್ರಕ್ಕೂ ಲಾಭವಿದೆ. ಜಾಗತೀಕರಣದ ಫಲವಾಗಿ ಯಾವುದೇ ರಾಷ್ಟ್ರದಲ್ಲಿ ಉತ್ಪಾದಿಸಿದ ವಸ್ತುವನ್ನು ವಿಶ್ವದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶವಿದೆ. ಅಲ್ಲದೆ, ಸ್ವತಃ ಭಾರತವೇ ವಿಶ್ವದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವಾಗ ಲಾಭದ ಪ್ರಮಾಣ ಹೆಚ್ಚೇ ಇರುತ್ತದೆ. ಅಲ್ಲದೆ, ಇಲ್ಲಿ ಧರ್ಮ, ರಾಜಕೀಯ ಮೊದಲಾದ ಅಂಶಗಳ ಪ್ರಭಾವವಿರುವುದಿಲ್ಲ. ಜಾತಿ, ಕುಲ, ವರ್ಣಗಳು ಗಣನೆಗೆ ಬರುವುದಿಲ್ಲ. ಜಾಗತಿಕ ಹೂಡಿಕೆದಾರ ಒಂದು ದೇಶದ ಆರ್ಥಿಕ ನೀತಿ ಹಾಗೂ ಮಾರುಕಟ್ಟೆ ಗಾತ್ರ ಪರಿಗಣಿಸಿಯೇ ಹೂಡಿಕೆಗೆ ಮುಂದಾಗುತ್ತಾನೆ. ಅಲ್ಲದೆ, ದೇಶದ ಪ್ರತಿಷ್ಠಿತ ಕಂಪನಿಗಳ ಮೂಲಕ ಮಾತ್ರವೇ ಹೂಡಿಕೆ ಮಾಡಲು ಇಚ್ಛಿಸುತ್ತಾನೆ. ಹೀಗಾದಾಗ ಎಲ್ಲಿಯೂ ಗುಣಮಟ್ಟದಲ್ಲಿ ರಾಜಿಯಾಗುವ ಸಂದರ್ಭವೇ ಬರುವುದಿಲ್ಲ.
==============
ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲಿ ಬಂಡವಾಳ ಹೂಡಿದರೂ ಲಾಭವಿದೆ. ಒಂದು ರಾಷ್ಟ್ರ ವಿದೇಶಿ ಬಂಡವಾಳ ಪಡೆಯುತ್ತಿದೆ ಎಂದರೆ, ಅದರೊಟ್ಟಿಗೆ ಅಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ನಿರ್ವಹಣಾ ವ್ಯವಸ್ಥೆ, ಮಾರುಕಟ್ಟೆ ತಂತ್ರಗಳು, ಕಾನೂನು ಮಾರ್ಗದರ್ಶನವೂ ಸಹಜವಾಗಿಯೇ ದೊರೆತಿರುತ್ತದೆ. ಇಲ್ಲಿನ ಒಂದು ಕಂಪನಿ ವಿದೇಶಿ ಬಂಡವಾಳ ಪಡೆಯುವ ಜತೆಗೆ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತದೆ. ಇದರಿಂದ ಅಲ್ಲಿ ಕೆಲಸ ಮಾಡುವ ನೌಕರರು, ಕಾರ್ವಿುಕರ ಜೀವನಶೈಲಿ ಸುಧಾರಿಸುತ್ತದೆ. ಜನರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸರಕು ಸೇವೆಗಳು ಲಭ್ಯವಾಗುತ್ತವೆ. ಜನರ ಜೀವನ ಗುಣಮಟ್ಟ ಹೆಚ್ಚುತ್ತದೆ. ಎಫ್​ಡಿಐ ಪಡೆದ ಕಂಪನಿಗೆ ಲಾಭ ಹೆಚ್ಚಿ, ಅದು ಸರ್ಕಾರಕ್ಕೆ ಪಾವತಿಸುವ ತೆರಿಗೆ ಪ್ರಮಾಣವೂ ಹೆಚ್ಚುತ್ತದೆ. ಹೀಗೆ ಬಂಡವಾಳ ಕೊರತೆ ಇರುವ ರಾಷ್ಟ್ರಗಳಿಗೆ ಎಫ್​ಡಿಐನಿಂದ ಎಲ್ಲ ರೀತಿಯಲ್ಲೂ ಲಾಭವಿದೆ. ಕೆಲ ರಾಷ್ಟ್ರಗಳು ವಿದೇಶಿ ಬಂಡವಾಳ ಆಕರ್ಷಿಸಲು ತೆರಿಗೆ ವಿನಾಯಿತಿಯನ್ನೂ ಘೊಷಿಸುತ್ತವೆ.
==============
ಎಫ್​ಡಿಐನಿಂದ ಕೆಲವು ಅಪಾಯಗಳೂ ಇವೆ. ಕಂಪನಿಗಳು ಕೃಷಿಯಲ್ಲಿ ತಮ್ಮ ಪ್ರಭಾವ ಬೀರಬಹುದು. ಕಂಪನಿಗಳು ಹೇಳಿದಂತೆ ರೈತರು ಬೆಳೆ ಬೆಳೆಯಬೇಕಾಗಬಹುದು. ಕೃಷಿ ಉತ್ಪನ್ನಕ್ಕೆ ಬೆಲೆಯನ್ನೂ ಕಂಪನಿಗಳೇ ನಿರ್ಧರಿಸುವ ಮಟ್ಟಕ್ಕೆ ಬರಬಹುದು. ಅವರು ಹೇಳಿದ ದರಕ್ಕೇ ಉತ್ಪನ್ನ ಮಾರಾಟ ಮಾಡಬೇಕಾಗಬಹುದು.
===============
ಅಪಾಯವೇನು?
============
ಒಂದು ರಾಷ್ಟ್ರ ತನ್ನ ರಾಜತಾಂತ್ರಿಕ ಹಾಗೂ ಭದ್ರತಾ ಪ್ರಾಮುಖ್ಯತೆ ಹೊಂದಿರುವ ಉದ್ಯಮಗಳ ಮಾಲೀಕತ್ವವನ್ನು ವಿದೇಶಿ ಹೂಡಿಕೆದಾರರಿಗೆ ನೀಡುವುದು ಅಪಾಯ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯೇ ತನ್ನ ವರದಿಯಲ್ಲಿ ತಿಳಿಸಿದೆ. ಐಎಂಎಫ್ ನಿಯಮಗಳಂತೆ ಯಾವುದೇ ಕಂಪನಿಯ ಬಂಡವಾಳದಲ್ಲಿ ಶೇ.10ಕ್ಕಿಂತ ಹೆಚ್ಚು ಪಾಲು ಹೊಂದಿದ್ದರೆ ಆ ಕಂಪನಿಯ ಮಾಲೀಕತ್ವ ಪಡೆಯಲಾಗದಿದ್ದರೂ, ಕಂಪನಿಯ ವ್ಯವಹಾರ, ನಿರ್ವಹಣೆ ಹಾಗೂ ನೀತಿಗಳಲ್ಲಿ ಪ್ರಭಾವ ಬೀರಬಹುದಾಗಿದೆ. ಹೂಡಿಕೆಯನ್ನೇ ಹಿಂಪಡೆಯುವ ಅಪಾಯವೂ ಇದೆ. ಹೀಗಾಗಿ ಸರ್ಕಾರ ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಬೇಕೆಂಬುದನ್ನು ವಿವೇಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ
=============
ಅನುಕೂಲಗಳೇನು?
============
# ಎಫ್​ಡಿಐನಿಂದ ಸಾಕಷ್ಟು ಬಂಡವಾಳ ದೊರೆತು ವಿತ್ತೀಯ ಸ್ಥಿರತೆಯೊಂದಿಗೆ ಆರ್ಥಿಕ ಅಭಿವೃದ್ಧಿ ಸಾಧ್ಯ
# ಉತ್ಪಾದನೆ ಹೆಚ್ಚಿ ಬೇಡಿಕೆ- ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಬಹುದು.
# ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ರಫ್ತಿಗೆ ಪ್ರೇರಣೆ ಸಿಗಲಿದೆ.
# ವಿವಿಧ ರಾಷ್ಟ್ರಗಳ ಕಂಪನಿಗಳ ಪ್ರವೇಶದಿಂದ ದರ-ಗುಣಮಟ್ಟದಲ್ಲಿ ಸ್ಪರ್ಧೆ ಉಂಟಾಗಿ ಹಣದುಬ್ಬರ ನಿಯಂತ್ರಣದಲ್ಲಿರುತ್ತದೆ.
# ಅತ್ಯಾಧುನಿಕ ತಂತ್ರಜ್ಞಾನಗಳು ದೇಶವನ್ನು ಪ್ರವೇಶಿಸುತ್ತವೆ. ಉತ್ಪಾದನೆ ದ್ವಿಗುಣಗೊಳ್ಳುತ್ತದೆ.
# ಹಲವು ಕಂಪನಿಗಳು, ಉತ್ಪಾದನಾ ಕಂಪನಿಗಳು ಪ್ರವೇಶದಿಂದ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ.
# ಎಫ್​ಡಿಐನಿಂದ ದೇಶದ ಆರ್ಥಿಕತೆಗಿರುವ ಅಪಾಯ
# ದೇಶೀಯ ಸಂಶೋಧನೆ ಹಿನ್ನಡೆ
# ವಿದೇಶಿ ಕಂಪನಿಗಳ ಪಾರಮ್ಯ
# ಮಾರುಕಟ್ಟೆ ವಿದೇಶೀಯರ ಕೈಗೆ
# ಸರ್ಕಾರದ ಮೇಲೆ ಹಿಡಿತ
# ಸಣ್ಣ ಉದ್ಯಮ, ಕೃಷಿಗೆ ಹೊಡೆತ
# ಜಾಗತಿಕವಾಗಿ ಕುಸಿತ ಕಂಡಿರುವ ಎಫ್​ಡಿಐ
=============
ವಿಶ್ವಸಂಸ್ಥೆಯ ಕಾನ್ಪರೆನ್ಸ್ ಆನ್ ಟ್ರೇಡ್ ಆಂಡ್ ಡೆವಲಪ್​ವೆುಂಟ್ ಪ್ರಕಾರ ಎಫ್​ಡಿಐ 2017ರಲ್ಲಿ ಶೇ.16ರಷ್ಟು ಇಳಿಕೆಯಾಗಿದೆ. ಆದರಲ್ಲೂ ಮುಂದುವರಿದ ದೇಶಗಳಲ್ಲಿ ಶೇ. 27ರಷ್ಟು ಕಡಿಮೆಯಾಗಿದೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರವಂತೂ ಅಮೆರಿಕ ಎಫ್​ಡಿಐ ವಿರೋಧಿಯಾಗಿದೆ ಎಂದೇ ಹೇಳಬಹುದು. ಉತ್ತರ ಅಮೆರಿಕದ ಎಫ್​ಡಿಐ ಒಳಹರಿವು ಪ್ರಮಾಣ ಶೇ.33ರಷ್ಟು ಕಡಿಮೆಯಾಗಿದೆ. ಅತಿ ಹೆಚ್ಚು ಎಫ್​ಡಿಐ ಒಳಹರಿವು ಹೊಂದಿರುವ ರಾಷ್ಟ್ರಗಳಲ್ಲಿ ಭಾರತ 10ನೇ ಸ್ಥಾನದಲ್ಲಿದೆ. 2017ರಲ್ಲಿ ಭಾರತಕ್ಕೆ 45 ಶತಕೋಟಿ ಡಾಲರ್ ಎಫ್​ಡಿಐ ಹರಿದು ಬಂದಿದೆ. ಏಷ್ಯಾದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಎಫ್​ಡಿಐ ಒಳಹರಿವಿನಲ್ಲಿ ಶೇ.30ರಷ್ಟು ಏರಿಕೆಯಾಗಿದೆ. 2016ರಲ್ಲಿ ಶೇ.25ರಷ್ಟು ಏರಿಕೆಯಾಗಿತ್ತು. ಭಾರತದಲ್ಲಿ 2017ರ ಒಂದೇ ವರ್ಷದಲ್ಲಿ ಎಫ್​ಡಿಐ 8 ಶತಕೋಟಿ ಡಾಲರ್​ನಿಂದ 22 ಶತಕೋಟಿ ಡಾಲರ್​ಗೆ ಹೆಚ್ಚಿದೆ. 2018ರಲ್ಲಿ ಎಫ್​ಡಿಐ ಪ್ರಮಾಣ ಮತ್ತೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ