ಗುರುವಾರ, ಮಾರ್ಚ್ 29, 2018

ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ ಜಿಸ್ಯಾಟ್‌-6ಎ ವಿಶೇಷತೆಗಳು

====================
ನವದೆಹಲಿ: ದೇಶೀಯ ಸಂವಹನ ಕ್ಷೇತ್ರಕ್ಕೆ ಜಿಸ್ಯಾಟ್‌-6ಎ ಉಪಗ್ರಹ ಹೊಸ ಶಕ್ತಿ ತುಂಬಲಿದ್ದು, ಇಸ್ರೋ ನಿರ್ಮಿತ ಜಿಸ್ಯಾಟ್ 6ಎ ಬಹು ಉದ್ದೇಶಿತ ಉಪಗ್ರಹವಾಗಿದೆ.
=========
ದೇಶೀಯ ಸಂವಹನ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗೆ ಸಜ್ಜಾಗಿರುವ ಇಸ್ರೋ ಜಿಎಸ್‌ಎಟಿ-6ಎ ಉಪಗ್ರಹವನ್ನು ಗುರುವಾರ ಬಾಹ್ಯಕಾಶಕ್ಕೆ  ಉಡಾಯಿಸಲಿದ್ದು, ಇಸ್ರೋ ತಯಾರಿಸುವ "ಎಸ್‌- ಬ್ಯಾಂಡ್‌' ಮಾದರಿಯ ಸಂವಹನ ಉಪಗ್ರಹ ಇದಾಗಿದೆ. ಈ ವರ್ಷ ಇಸ್ರೋ ಉಡಾಯಿಸುತ್ತಿರುವ 2ನೇ ಉಪಗ್ರಹ ಇದಾಗಿದ್ದು, ಎಸ್‌- ಬ್ಯಾಂಡ್‌ ಮಾದರಿಯ ಅತ್ಯಂತ  ಶಕ್ತಿಶಾಲಿ ಸಂವಹನ ಉಪಗ್ರಹ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.  

ಎಸ್‌-ಬ್ಯಾಂಡ್‌ ವಿಶೇಷತೆಯೇನು?
========
ವಿದ್ಯುದಯಸ್ಕಾಂತ ಮಾದರಿಯ 2ರಿಂದ 4 ಗಿಗಾ ಹರ್ಟ್ಸ್ ವರೆ‌ಗಿನ ತರಂಗಗಳನ್ನು ಈ ಉಪಗ್ರಹ ಸೃಷ್ಟಿಸುವ ಸಾಮರ್ಥ್ಯಹೊಂದಿದ್ದು, ಅಲ್ಟ್ರಾ ಹೈ ಫ್ರೀಕ್ವೆನ್ಸಿ (ಯುಎಚ್‌ಎಫ್) ಹಾಗೂ ಸೂಪರ್‌ ಹೈ ಫ್ರೀಕ್ವೆನ್ಸಿ (ಎಸ್‌ಎಚ್‌ಎಫ್) ನಡುವಿನ ಬ್ಯಾಂಡ್‌ಗಳ ತರಂಗಾಂತರ ಹೊರಹೊಮ್ಮಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಸದ್ಯಕ್ಕೆ ವಿಶ್ವದಾದ್ಯಂತ, 4ಜಿ ಮೊಬೈಲ್‌ ಡೇಟಾಕ್ಕಾಗಿ 2.4 ಗಿಗಾ ಹರ್ಟ್ಸ್ ಬಳಸಲಾಗುತ್ತಿದ್ದು, ಇದಕ್ಕೂ ಹೆಚ್ಚಿನ ವೇಗದ ತಂತ್ರಜ್ಞಾನಗಳು ಬಂ ದಾಗಲೂ ಈ ಎಸ್‌-ಬ್ಯಾಂಡ್‌ನಿಂದ ಸಮರ್ಥ ಸೇವೆ ಪಡೆಯಬಹುದು. 
=========
ಏನಿದರ ವಿಶೇಷತೆ?
==========
ಇದೊಂದು 6 ಮೀ. ಉದ್ದದ ಎಸ್‌- ಬ್ಯಾಂಡ್‌ "ಸ್ವಯಂ ಚಾಲಿತ' ಹರಡಿ ಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಉಪಗ್ರಹವು ಕಕ್ಷೆಗೆ ಸೇರುತ್ತಲೇ ಇದು ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತ ಮೂರು ಪಟ್ಟು ದೊಡ್ಡದಾಗಿದೆ. ಈ ಉಪಗ್ರಹ ಉಡಾವಣೆ ಮೂಲಕ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವುದು, ಭವಿಷ್ಯದ ಸಂವಹನ ತಂತ್ರಜ್ಞಾನಗಳಿಗೆ ವೇದಿಕೆ ಕಲ್ಪಿಸುವುದು. ನಿಸ್ತಂತು ಸಂಪರ್ಕವನ್ನು ಮತ್ತಷ್ಟು ಉದ್ದೀಪನಗೊಳಿಸುವುದು ಮತ್ತು ಭಾರತೀಯ ಸೇನೆಗೆ ಅತ್ಯಾಧುನಿಕ ಸಂವಹನ ವ್ಯವಸ್ಥೆ ನೀಡುವುದು ಈ ಉಡಾವಣೆಯ ಪ್ರಮುಖ ಉದ್ದೇಶವಾಗಿದೆ.
==========
ಈ ಉಪಗ್ರಹ ಸುಮಾರು 2 ಟನ್‌ ತೂಕವಿದ್ದು, ಈ ಉಪಗ್ರಹ ನಿರ್ಮಾಣಕ್ಕಾಗಿ ಇಸ್ರೋ ಒಟ್ಟು 270 ಕೋಟಿ ರೂ ನಿರ್ಮಾಣ ವೆಚ್ಚ ಮಾಡಿದೆ. ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಜಿಎಸ್ ಎಲ್ ವಿ-ಎಫ್ 08 ರಾಕೆಟ್ ಈ ಉಪಗ್ರಹವನ್ನು ಇಂದು ಕಕ್ಷೆಗೆ ಸೇರಿಸಲಿದೆ. ಜಿಎಸ್ ಎಲ್ ವಿ-ಎಫ್ 08 ರಾಕೆಟ್ 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದ್ದು, ಇದರ ಇಂಧನ ದಕ್ಷತೆ ಈ ಹಿಂದಿನ ರಾಕೆಟ್ ಗಳಿಗಿಂತಲೂ ಉತ್ತಮವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
===========
ಇನ್ನು ಜಿ-ಸ್ಯಾಟ್ 6ಎ ಉಪಗ್ರಹವನ್ನು ಭೂಮಿಯಿಂದ ಸುಮಾರು 36,000ಕಿ.ಮೀ. ದೂರದಲ್ಲಿರುವ ಕಕ್ಷೆಗೆ ರವಾನೆ ಮಾಡಲಾಗುತ್ತಿದ್ದು, ಉಡ್ಡಯನ ನಂತರ ಕಕ್ಷೆಗೆ ಸೇರಲು ಉಪಗ್ರಹ 17 ನಿಮಿಷ. 46.50 ಸೆಕೆಂಡ್ ಗಳ ಸಮಯದಲ್ಲಿ ತನ್ನ ಕಕ್ಷೆ ಸೇರಿಕೊಳ್ಳಲಿದೆ. ಈ ಉಪಗ್ರಹ ಸೇವಾವಧಿ 10 ವರ್ಷಗಳು ಎಂದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ