ಶುಕ್ರವಾರ, ಮಾರ್ಚ್ 30, 2018

ಈಸ್ಟರ್ ಸಂಡೇ" & "ಗುಡ್ ಫ್ರೈಡೇ"

==============================
[ಸಾಮಾನ್ಯಜ್ಞಾನ ವೃದ್ಧಿಗಾಗಿ ಈ ಮಾಹಿತಿಯ ಸಂಕ್ಷಿಪ್ತ ರೂಪದ ಮರುಪ್ರಕಟಣೆ]

ಕ್ರಿಶ್ಚಿಯನ್‌ ಹಬ್ಬಗಳು ಹೆಚ್ಚಾಗಿ ತಾರೀಕಿನ ಆಧಾರದಲ್ಲೇ ಅಂದರೆ ಸೂರ್ಯನ ಚಲನೆಯ ಮೇಲೆ ನಿಗದಿಯಾಗಿರುತ್ತವೆ. ಆದರೆ ಇದಕ್ಕೆ ಅಪವಾದವಾಗಿ ಮತ್ತು ಸ್ವಾರಸ್ಯಕರವಾಗಿ ಕ್ರೈಸ್ತಧರ್ಮದವರ ಬಹುಮುಖ್ಯ ಹಬ್ಬವಾದ 'ಈಸ್ಟರ್‌" ಯಾವ ದಿನ ಆಚರಿಸಲ್ಪಡುತ್ತದೆ ಎಂಬ ಲೆಕ್ಕಾಚಾರದಲ್ಲಿ ಸೂರ್ಯ-ಚಂದ್ರ ಇಬ್ಬರೂ ಇದ್ದಾರೆ! ಈಸ್ಟರ್‌ ಹಬ್ಬವು ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು!

ಈಸ್ಟರ್ ಲೆಕ್ಕಾಚಾರ ಹೀಗಿದೆ- ''ಪ್ರತಿವರ್ಷ ಮಾರ್ಚ್‌ 21ರಂದು ಸಂಭವಿಸುವ ಸಮನಿಶಿ (Equinox) ಆನಂತರದ ಹುಣ್ಣಿಮೆ ಆದಮೇಲೆ ಬರುವ ಮೊದಲ ಭಾನುವಾರ"ವೇ ಈಸ್ಟರ್‌ ಸಂಡೇ. ಉದಾಹರಣೆಗೆ ಈವರ್ಷ 2018ರಲ್ಲಿ ಮಾರ್ಚ್ 21ರಂದು ಸಮನಿಶಿ (Equinox ಎಂದರೆ ಸಮಪ್ರಮಾಣದಲ್ಲಿ ಹಗಲು-ರಾತ್ರಿ). ಆನಂತರ ಮಾರ್ಚ್ 31ರಂದು ಹುಣ್ಣಿಮೆ. ಅದಾದಮೇಲಿನ ಭಾನುವಾರ ಅಂದರೆ 1 ಏಪ್ರಿಲ್. ಆ ದಿನ "ಈಸ್ಟರ್ ಸಂಡೇ".

ಈಸ್ಟರ್‌ ಸಂಡೇ ನಿರ್ಧಾರವಾದ ಮೇಲೆ ಅದರ ಹಿಂದಿನ ಶುಕ್ರವಾರವು "ಗುಡ್‌‌ಫ್ರೈಡೇ" ಎಂದು ಗುರುತಿಸಲ್ಪಡುತ್ತದೆ. ಈವರ್ಷ ಗುಡ್‌ಫ್ರೈಡೇ ಮಾರ್ಚ್ 30ಕ್ಕೆ.

ಈಸ್ಟರ್ ಲೆಕ್ಕಾಚಾರದಲ್ಲಿ ಹುಣ್ಣಿಮೆ ಯಾಕಪ್ಪಾಅಂತಂದ್ರೆ ಆ ಹುಣ್ಣಿಮೆಯು Paschal Full moon. ಕ್ರಿಸ್ತನ ’ಕೊನೇ ಔತಣ’ (last supper) ನಡೆದದ್ದು Paschal Full moon ಅಂದರೆ ಹುಣ್ಣಿಮೆಯಂದು. ಅದಾದ ನಂತರದ ಆದಿತ್ಯವಾರ ಪುನರುತ್ಥಾನ (resurrection). ಅದೇ ಈಸ್ಟರ್ ಹಬ್ಬ.

ಈಸ್ಟರ್‌ ಹಬ್ಬದ ಹೆಸರಿನ ಮೂಲ ಬ್ಯಾಬಿಲೋನಿಯನ್‌ ಸಂಸ್ಕೃತಿಯಲ್ಲಿ ಪ್ರೀತಿ ಮತ್ತು ಸಂತಾನೋತ್ಪತ್ತಿಯ ದೇವತೆಯಾದ Ishtar. ಜೀವನಚೈತನ್ಯವನ್ನು ಉಡುಗಿಸುವ ಚಳಿ ಹಿಮಪಾತಗಳ ನಂತರ ಪ್ರಕೃತಿಯಲ್ಲಿ ನಳನಳಿಸುವ ಕಾಂತಿಯನ್ನು, ಉಲ್ಲಾಸವನ್ನು ತರುವ, ವಸಂತಋತುವಿಗೆ ಉತ್ಸಾಹ ಸಡಗರ ತುಂಬಿದ ಸ್ವಾಗತ ಕೋರುವ ಕ್ರಮ ಪ್ರಾಚೀನ ಸಂಸ್ಕೃತಿಗಳೆಲ್ಲದರಲ್ಲೂ ಇತ್ತು. ಪ್ರಕೃತಿಯನ್ನು ಚಿಗುರಿಸುವ ಆ ದೇವತೆಯನ್ನು ಸ್ಕಾಂಡಿನೇವಿಯನ್ನರು Ostra ಎಂದೂ ಆಂಗ್ಲೊಸಾಕ್ಸನ್ನರು Eostre ಎಂದೂ, ಜರ್ಮನ್ನರು Eastre ಎಂದೂ ಕರೆದು ಗೌರವಿಸುತ್ತಿದ್ದರು. ಐರೋಪ್ಯ ಭಾಷೆಗಳಲ್ಲಿನ ಈ ಪದಗಳೇ ಆಂಗ್ಲಭಾಷೆಯಲ್ಲಿ Easter ಎಂದಾಯ್ತು.

ಸಂತಾನೋತ್ಪತ್ತಿಗೆ ಕಾರಣವಾಗುವ Estrogen ಅಥವಾ Oestrogen ಹಾರ್ಮೊನ್‌ಗಳ ಹೆಸರಿನ ಮೂಲವೂ ಅದೇ. ಈಸ್ಟರ್‌ಗೂ ಮೊಟ್ಟೆಗಳಿಗೂ ನಂಟಿರುವುದು, ಮೊಟ್ಟೆಯು ಸಂತಾನವೃದ್ಧಿಯ ಅರ್ಥಪೂರ್ಣ ಸಂಕೇತವಾಗಿರುವುದರಿಂದ. ಈಸ್ಟರ್‌ ಹಬ್ಬದ ವಾತಾವರಣದ ಇನ್ನೊಂದು ಅವಿನಾಭಾವ ಸಂಕೇತವಾದ ಮೊಲ ಸಹ ಸಂತಾನಾಭಿವೃದ್ಧಿಯ ಪ್ರತೀಕ. ರಾತ್ರಿಯ ಹೊತ್ತಿನಲ್ಲಿ ಆಹಾರವನ್ನು ಹುಡುಕುತ್ತ ಹೊರಡುವ ಮೊಲವು ಚಂದ್ರನ ಪ್ರತಿನಿಧಿಯಾಗಿಯೂ ಈಸ್ಟರ್‌ ಹಬ್ಬಕ್ಕೆ ಕಳೆಯೇರಿಸುತ್ತದೆಯೆಂದು ಪ್ರಾಚೀನ ಈಜಿಪ್ಟ್‌ ಮತ್ತು ಪರ್ಸಿಯನ್‌ ಸಂಸ್ಕೃತಿಗಳ ಜನರ ನಂಬಿಕೆಯಿದೆ.

ಬರ್ಮುಡಾದ ಬಿಳಿ ಲಿಲ್ಲಿ ಹೂಗಳು ಈಸ್ಟರ್‌ ಅಲಂಕಾರಕ್ಕೆಂದು ಬಳಕೆಯಾಗುವ ಹೂಗಳು. ಅಮೆರಿಕದಲ್ಲಿ ಇವು ಈಸ್ಟರ್‌ ಲಿಲ್ಲಿಗಳೆಂದೇ ಪ್ರಖ್ಯಾತ. ಏಸುವಿನ ಪುನರುತ್ಥಾನದ ವೇಳೆ ಗೇಬ್ರಿಯಲ್‌ ನುಡಿಸಿದ ಟ್ರಂಪೆಟ್‌ ಆಕಾರ ಈ ಲಿಲ್ಲಿ ಹೂಗಳಿಗಿರುವುದರಿಂದ ಮತ್ತು ಅವು ಪರಿಶುದ್ಧತೆಯ ಅಚ್ಚಬಿಳಿ ಬಣ್ಣದಲ್ಲಿರುವುದರಿಂದ ಈಸ್ಟರ್‌ ಹಬ್ಬದ ವಿಶೇಷವಾಗಿ ಬಳಕೆಯಾಗುತ್ತವೆ.

ಇದು ಈಸ್ಟರ್ ಸಂಡೇ ಮತ್ತು ಗುಡ್‌ ಫ್ರೈಡೇ ಕುರಿತ ಸಾಮಾನ್ಯಜ್ಞಾನ ಮಾಹಿತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ