ಶನಿವಾರ, ಮಾರ್ಚ್ 31, 2018

ಡೇ ಸ್ಪೆಷಲ್‌: ಏಪ್ರಿಲ್‌ ಫೂಲ್ಸ್‌ ಡೇ

=============
ವರ್ಷದ ಎಲ್ಲಾ ದಿನಗಳ ಪೈಕಿ ಏಪ್ರಿಲ್‌ 1 ತುಂಬಾ ವಿಶೇಷವಾದ ದಿನ. ಇಂದು ಇತರರನ್ನು ಮೂರ್ಖರನ್ನಾಗಿಸಿ ಅಥವಾ ತಾವೇ ಇತರರಿಂದ ಮೂರ್ಖರಾಗುವ ದಿನ. ಈ ದಿನವನ್ನು ಏಪ್ರಿಲ್‌ ಫೂಲ್ಸ್‌ ಡೇ ಅಥವಾ ಮೂರ್ಖರ ದಿನ ಎಂದು ಕರೆಯುತ್ತಾರೆ. ಈ ದಿನಕ್ಕೂ ಮೂರ್ಖತನಕ್ಕೂ ಏನೂ ಸಂಬಂಧವಿಲ್ಲವಾದರೂ ಬಹು ಹಿಂದಿನಿಂದಲೂ ಈ ದಿನವನ್ನು ಮೂರ್ಖರ ದಿನವೆಂದು ಕರೆಯುವುದು ವಾಡಿಕೆ. ಇಂದು ಜನರು ಇತರರಿಗೆ ಏನಾದರೂ ಸುಳ್ಳು ಹೇಳಿ ನಂಬುವಂತೆ ಮಾಡಿ ಮೂರ್ಖರನ್ನಾಗಿಸುತ್ತಾರೆ. ಬೇರೆಯವರು ಆ ಸುಳ್ಳನ್ನು ನಂಬಿ ಬೇಸ್ತು ಬಿದ್ದರೆ ಕೊನೆಗೆ ಅವರಿಗೆ ನಿಜ ವಿಷಯವನ್ನು ಹೇಳಿ ಏಪ್ರಿಲ್‌ ಫೂಲ್‌ ಎಂದು ಜೋರಾಗಿ ಕಿರುಚಿ ನಗುತ್ತಾರೆ. ಇಲ್ಲಿ ಅವರ ಸುಳ್ಳನ್ನು ನಂಬಿ ಬೇಸ್ತು ಬಿದ್ದವರೇ ಮೂರ್ಖರು. ಕೆಲವೊಮ್ಮೆ ಜನರು ಬೇರೆಯವರನ್ನು ಮೂರ್ಖರನ್ನಾಗಿಸಲು ಹೋಗಿ ತಾವೇ ಮೂರ್ಖರಾಗುವ ಸ್ವಾರಸ್ಯಕರ ಪ್ರಸಂಗಗಳೂ ಈ ದಿನ ನಡೆಯುವುದುಂಟು. ಒಟ್ಟಿನಲ್ಲಿ ಈ ದಿನ ಇತರರನ್ನು ಬೇಸ್ತು ಬೀಳಿಸಿ ನಕ್ಕು ನಲಿಯುವ ದಿನವಾಗಿದೆ.
==========
ಈ ದಿನ ಕೆಲವು ಸುದ್ದಿ ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಓದುಗರನ್ನು ಮೂರ್ಖರನ್ನಾಗಿಸುವುದೂ ಇದೆ. ಮರುದಿನ ಅದಕ್ಕೆ ಸಮಜಾಯಿಷಿ ನೀಡುವ ವರದಿ ಪ್ರಕಟವಾಗುತ್ತದೆ. ಆದರೆ ಈ ದಿನ ನಾವಾಡುವ ಯಾವುದೇ ಸುಳ್ಳುಗಳು ಗಂಭೀರವಾಗಿರಬಾರದು. ಅದರಿಂದ ಯಾರಿಗೂ ಯಾವುದೇ ರೂಪದ ಹಾನಿ ಅಥವಾ ಮನಸ್ಸಿಗೆ ನೋವು ಉಂಟಾಗಬಾರದು. ಬಹುತೇಕ ಜನರು ಈ ದಿನದಂದು ಒಂದಲ್ಲ ಒಂದು ರೀತಿಯಲ್ಲಿ ಮೂರ್ಖರಾಗಿರುವ ಘಟನೆಗಳು ಇರುತ್ತವೆ. ಪ್ರತಿವರ್ಷವೂ ವಿಶ್ವದ ಬೇರೆ ಬೇರೆ ದೇಶಗಳು ಈ ದಿನವನ್ನು ಏಪ್ರಿಲ್‌ ಫೂಲ್ಸ್‌ ಡೇ ಎಂದು ಆಚರಿಸುತ್ತವೆ. ಈ ದಿನ ಹೇಗೆ ಆರಂಭವಾಯಿತು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಆದರೆ ಈ ದಿನದ ಹುಟ್ಟಿನ ಕುರಿತಂತೆ ಹಲವಾರು ಕಥೆಗಳಿವೆ. ಇಂಥದ್ದೊಂದು ಕಥೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ರೋಮನ್ನರು ಮತ್ತು ಹಿಂದುಗಳು ಏಪ್ರಿಲ್‌ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತಿದ್ದರಂತೆ. ಆದರೆ 1582 ರಲ್ಲಿ 13 ನೇ ಪೋಪ್‌ ಗ್ರೆಗೊರಿಯವರು ಹೊಸ ಜಾರ್ಜಿಯನ್‌ ಕ್ಯಾಲೆಂಡರ್‌ ಅನುಸರಿಸುವಂತೆ ಆದೇಶ ನೀಡಿದರು. ಅದರ ಪ್ರಕಾರ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಬೇಕಿತ್ತು. ಇದನ್ನು ಯೂರೋಪ್‌ನ ಕೆಲವು ದೇಶಗಳು ಪಾಲಿಸಿದವು. ಆದರೆ ಕೆಲವು ದೇಶಗಳು ಇದನ್ನು ತಿರಸ್ಕರಿಸಿ ಏಪ್ರಿಲ್‌ 1ನ್ನೇ ಹೊಸ ವರ್ಷವೆಂದು ಆಚರಿಸಿದರು. ಇತರ ಜನರು ಇವರನ್ನು ಹಾಸ್ಯ ಮಾಡುವುದು ಸಾಮಾನ್ಯವಾಯಿತು. ಇವರು ಸುಳ್ಳನ್ನು ನಂಬುವವರು ಎಂಬ ಸಂದೇಶ ರವಾನೆಯಾಯಿತು. ಅಂದಿನಿಂದ ಈ ದಿನ ಮೂರ್ಖರ ದಿನವಾಯಿತು ಎಂದು ಹೇಳಲಾಗುತ್ತಿದೆ.
==========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ