ಗುರುವಾರ, ಮಾರ್ಚ್ 29, 2018

ಡೇ ಸ್ಪೆಷಲ್‌: ಗುಡ್‌ ಫ್ರೈಡೇ

===============
ಕ್ರೈಸ್ತರಿಗೆ ಪವಿತ್ರವಾದ ದಿನ. ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವೆಂದು ಹೇಳುತ್ತಾರೆ. ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ ಎಂತಲೂ ಕರೆಯುತ್ತಾರೆ. ಶಿಲುಬೆಗೆ ಏರಿಸಿದ ದಿನವಿದು: ಶುಭ ಸಂದೇಶಗಳ ಪ್ರಕಾರ ಜೆರುಸಲೇಮ… ದೇವಾಲಯದ ಕಾವಲು ಪಡೆಯವರು ಯೇಸುವಿನ ಶಿಷ್ಯ ಜೂದಾಸ್‌ ಇಸ್ಕಾರಿಯೋತನನ್ನು ಮುಂದಿಟ್ಟುಕೊಂಡು ಯೇಸುವನ್ನು ಬಂಧಿಸುತ್ತಾರೆ. ಪ್ರಧಾನ ಗುರು ಕಾಯಫನ ನೇತೃತ್ವದ ಸೆನ್ಹೆದ್ರಿನ್‌ ನ್ಯಾಯಸ್ಥಾನದ ಮುಂದೆ ತಂದು ನಿಲ್ಲಿಸುತ್ತಾರೆ. ವಿಚಾರಣೆ ವೇಳೆಯಲ್ಲಿ ಸಾಕಷ್ಟು ಸುಳ್ಳು ಆರೋಪಗಳನ್ನು ಯೇಸುವಿನ ಮೇಲೆ ಮಾಡುತ್ತಾರೆ. ಆದಾಗ್ಯೂ ಯೇಸು ಮಾತನಾಡದೇ ಸುಮ್ಮನಿರುತ್ತಾರೆ. ಕೊನೆಗೆ ಪ್ರಧಾನಗುರುವು ನೀನು ದೇವಪುತ್ರ ಹಾಗೂ ಅಭಿಷಕ್ತನಾದ ಲೋಕೋದ್ಧಾರಕನೋ? ಎಂದು ಪ್ರಶ್ನಿಸುತ್ತಾರೆ. ಆಗ ಯೇಸು ನಿಮ್ಮ ಮಾತು ಸತ್ಯ. ಕಾಲಾಂತರದಲ್ಲಿ ನೀವೇ ನೋಡುವಿರಿ ಎನ್ನುತ್ತಾರೆ. ಕೂಡಲೇ ಸಿಟ್ಟಾದ ಕಾಯಫನು ಧರ್ಮನಿಂದನೆ ಎಂದು ಅಬ್ಬರಿಸಿ ಯೇಸುವಿಗೆ ಮರಣದಂಡನೆ ವಿಧಿಸುತ್ತಾನೆ. ಯೇಸುವನ್ನು ಶಿಲುಬೆಗೆ ಏರಿಸಿದಾಕ್ಷಣ ಕತ್ತಲೆ ಆವರಿಸುತ್ತದೆ. ಭೂಕಂಪವಾಗುತ್ತದೆ. ಆಗ ಕಾವಲಿಗಿದ್ದ ಶತಾಧಿಪತಿ ಈತ ದೇವಪುತ್ರ ಎನ್ನುತ್ತಾನೆ. 

ಆಚರಣೆ ಹೇಗೆ?

ಶುಭ ಶುಕ್ರವಾರದಂದು ಚರ್ಚಿನೊಳಗಿನ ಶಿಲುಬೆ, ದೀಪಸ್ತಂಭ, ಪೀಠವಸ್ತ್ರಗಳನ್ನು ತೆಗೆದುಹಾಕಿ ಪೀಠವನ್ನು ಹಾಗೂ ತೀರ್ಥದಾನಿಯನ್ನು ಬರಿದುಮಾಡಿರುತ್ತಾರೆ. ಈ ಅವಧಿಯಲ್ಲಿ ದೇವಾಲಯದ ಗಂಟೆಗಳನ್ನೂ ನುಡಿಸುವುದಿಲ್ಲ. ಕೆಂಪು ವಸ್ತ್ರ ಧರಿಸಿದ ಚರ್ಚ್‌ನ ಫಾದರ್‌ ಮೌನವಾಗಿ ಚರ್ಚ್‌ ಪ್ರವೇಶಿಸುತ್ತಾರೆ. ಹಾಡನ್ನೂ ಹಾಡುವುದಿಲ್ಲ. ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಬೋರಲಾಗಿ ಮಲಗಿ ಯೇಸುವಿನ ಶಿಲುಬೆಯಾತನೆಯ ಸ್ಮರಣೆ ಮಾಡುತ್ತಾರೆ. ನಂತರ ಸಮುದಾಯದ ಪ್ರಾರ್ಥನೆ ಮಾಡುತ್ತಾರೆ. ದೈವನುಡಿಯನ್ನು ಪಠಿಸುತ್ತಾರೆ. ಪ್ರತಿ ಪ್ರಾರ್ಥನೆಯ ನಂತರ ಎಲ್ಲರೂ ಮೊಣಕಾಲೂರಿ ಧ್ಯಾನಿಸುತ್ತಾರೆ. ಶಿಲುಬೆಗೆ ನಮಸ್ಕರಿಸುತ್ತಾರೆ. ಶೋಕಗೀತೆ ಹಾಡುತ್ತಾರೆ. ಸಾಂಗ್ಯದ ಅಂತಿಮ ಭಾಗವಾಗಿ ಸತ್ಪ್ರಸಾದ ವಿತರಣೆ ನಡೆಯುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ