ಜಂಗಲ್ ಸಫಾರಿ:
=============
ದಕ್ಷಿಣ ಆಫ್ರಿಕಾದ ಮೂರನೇ ದೊಡ್ಡ ರಾಷ್ಟ್ರೀಯ ವನ್ಯಜೀವಿ ಪಾರ್ಕ್ ಪಿಲನೆಸ್‌ಬರ್ಗ್. ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶ ವ್ಯಾಪಿಸಿರುವ ಇಲ್ಲಿ ಸಫಾರಿ ಮಾಡುವುದೇ ಒಂದು ಅದ್ಬುತ ಅನುಭವ. ಪಿಲನೆಸ್‌ಬರ್ಗ್ ಪಾರ್ಕ್ ದಟ್ಟವಾದ ಕಾಡಲ್ಲ. ಅಲ್ಲಿ 10-15 ಅಡಿಯ ಕುರುಚಲು ಗಿಡಗಳಿವೆ. ಪ್ರಾಣಿಗಳ ನೆಮ್ಮದಿ ಹಾಳಾಗುವಂತಹ ಯಾವುದೇ ಕೃತ್ಯಗಳು ಮನುಷ್ಯರಿಂದ ನಡೆಯುವುದಿಲ್ಲ. ಪ್ರವಾಸಿಗರಿಂದ ಅಲ್ಲಿನ ನಿಯಮ ಉಲ್ಲಂಘನೆಯಾಗದಂತೆ ಗೈಡ್‌ಗಳೇ ಎಚ್ಚರವಹಿಸುತ್ತಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವಿಶೇಷವೆಂದರೆ ಇಲ್ಲಿನ ಬಹುತೇಕ ಕಡೆಗಳಲ್ಲಿ ಪ್ರವಾಸಿ ವಾಹನ ಚಾಲಕರೇ ಪ್ರವಾಸಿ ಗೈಡ್‌ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಾರೆ. ಸಫಾರಿ ವಾಹನ ಚಾಲಕರಂತೂ ಆ ಪ್ರದೇಶವನ್ನು ಇಂಚಿಂಚೂ ತಿಳಿದುಕೊಂಡಿರುತ್ತಾರೆ. ಪ್ರತಿಯೊಂದು ಪ್ರಾಣಿಯ ಚಲನವಲನವನ್ನು ಅವಲೋಕನ ಮಾಡಿರುತ್ತಾರೆ. ಪ್ರಾಣಿಯ ಹೆಜ್ಜೆಗುರುತು, ಅವು ಮಾಡುವ ಸಣ್ಣ ಸದ್ದನ್ನು ಕೂಡ ಗುರುತಿಸಿ, ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವಷ್ಟು ಕೌಶಲ್ಯ ಬೆಳೆಸಿಕೊಂಡಿರುತ್ತಾರೆ. ಸಫಾರಿ ವಾಹನವೆಂದರೆ ಮಿನಿ ಸಂಚಾರಿ ಹೊಟೆಲ್ ಇದ್ದ ಹಾಗೆ ಇರುತ್ತದೆ. ಪ್ರವಾಸಿಗರಿಗೆ ಒಂದು ಸಣ್ಣ ತೊಂದರೆಯೂ ಆಗದಂತೆ ಗೈಡ್‌ಗಳು ಮುನ್ನೆಚ್ಚರಿಕೆ ವಹಿಸುತ್ತಾರೆ.
===========
ಮುಂಜಾನೆ 5 ಗಂಟೆ ಹೊತ್ತಿಗೆ ಆರಂಭವಾಗುವ ಸಫಾರಿ ಬೆಳಗ್ಗೆ 10 ಗಂಟೆಗೆ ಪೂರ್ಣಗೊಂಡರೆ, ಪುನಃ ಸಂಜೆ 5 ಗಂಟೆಗೆ ಆರಂಭವಾಗಿ ರಾತ್ರಿ 7.30ರ ವರೆಗೂ ನಡೆಯುತ್ತದೆ. ಬೆಳಗ್ಗೆ 5 ಗಂಟೆಗೆ ಎಷ್ಟು ಬೆಳಕಿರುತ್ತದೆಯೋ ರಾತ್ರಿ 7.30ರ ಹೊತ್ತಿಗೂ ಅಷ್ಟೇ ಬೆಳಕಿರುತ್ತದೆ. ಅದು ಭಾರತದಲ್ಲಿ ಬೆಳಗ್ಗೆ 8 ಗಂಟೆಗೆ ಹೇಗಿರುತ್ತದೆಯೋ ಹಾಗಿರುತ್ತದೆ. ಒಂದೇ ಸಫಾರಿಗೆ ಎಲ್ಲ ಪ್ರಾಣಿಗಳನ್ನು ಕಾಣುವುದು ತೀರಾ ವಿರಳ. ಕನಿಷ್ಟ 3-4 ಸಫಾರಿ ಮಾಡಿದರೆ ಬಹುತೇಕ ಎಲ್ಲ ಪ್ರಾಣಿಗಳ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಗೈಡ್‌ಗಳಿಗೆ ಪ್ರಾಣಿಗಳ ಚಲನವಲನದ ಮಾಹಿತಿ ಇರುತ್ತದೆ. ಆದಾಗ್ಯೂ ಎಲ್ಲ ಸಂದರ್ಭಗಳಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಹೇಳಲಾಗದು. ಪಿಲನೆಸ್‌ಬರ್ಗ್ ಪಾರ್ಕ್‌ನಲ್ಲಿ ಹುಲಿಯನ್ನು ಹೊರತುಪಡಿಸಿ ಎಲ್ಲ ಮಾದರಿಯ ಪ್ರಾಣಿಗಳೂ ಇವೆ. 40 ಸಿಂಹಗಳು, ನೂರಾರು ಸಂಖ್ಯೆಯಲ್ಲಿ ಆನೆಗಳು, ಚಿರತೆಗಳು, ಖಡ್ಗಮೃಘಗಳು, ನೀರಾನೆಗಳು, ಸಾವಿರಾರು ಜಿಬ್ರಾ, ಜಿರಾಫೆ, ಜಿಂಕೆ, ಇಂಪಾಲ ಮತ್ತಿತರ ಪ್ರಾಣಿಗಳಿವೆ. ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾರ್ಕ್ ಮಧ್ಯೆ ರಸ್ತೆಗಳು ಹಾದುಹೋಗಿದ್ದರೂ ಸಾರ್ವಜನಿಕರಿಂದ ಪ್ರಾಣಿಗಳಿಗೆ ತೊಂದರೆಯಾದ ಉದಾಹರಣೆಗಳು ಕಡಿಮೆ. ಅಲ್ಲಿನ ಜನ ಅಷ್ಟರಮಟ್ಟಿಗೆ ಸ್ವಯಂ ಶಿಸ್ತನ್ನು ಅಳವಡಿಸಿಕೊಂಡಿದ್ದಾರೆ.
============
ಹಾಟ್ ಬಲೂನ್ ಸಫಾರಿ:
••••••••••••••••••
ದಕ್ಷಿಣ ಆಫ್ರಿಕಾದ ಪ್ರವಾಸದ ಆಕರ್ಷಣೆಗಳಲ್ಲಿ ಮತ್ತೊಂದು ಪ್ರಮುಖವಾದದ್ದು ಹಾಟ್ ಬಲೂನ್ ಸಫಾರಿ. ಜೊಹಾನ್ಸಬರ್ಗ್‌ನಿಂದ ಸುಮಾರು 75 ಕಿಮೀ ದೂರದಲ್ಲಿರುವ ಮಗಲಿಸ್‌ಬರ್ಗ ಎಂಬಲ್ಲಿ ವಿಶಾಲವಾದ ಪ್ರದೇಶದಲ್ಲಿ ಬಲೂನ್ ಸಫಾರಿ ನಡೆಯುತ್ತದೆ. ಬಿಲ್ ಹಾರೂಪ್ ಬಲೂನ್ ಸಫಾರಿಯ ರೂವಾರಿ. ಬೃಹದಾಕಾರದ ಬಲೂನ್‌ಗೆ ಸುಮಾರು 6 ಜನ ಕುಳಿತುಕೊಳ್ಳಬಹುದಾದ ಬೆತ್ತದ ಬುಟ್ಟಿ ಅಳವಡಿಸಿರುತ್ತಾರೆ. ಅದಕ್ಕೆ ಅಳವಡಿಸಲಾಗಿರುವ 2 ಸಿಲಿಂಡರ್ ಗ್ಯಾಸ್‌ನಿಂದ ಬೆಂಕಿ ಹಚ್ಚಿ ಶಾಖ ಉತ್ಪಾದಿಸಲಾಗುತ್ತದೆ. 20 ನಿಮಿಷ ಕಾದ ನಂತರ ಬಲೂನ್ ಮೇಲಕ್ಕೆ ಹಾರುತ್ತದೆ. ಸುಮಾರು ಒಂದು ಗಂಟೆ ಕಾಲ 700 ಮೀಟರ್ ಎತ್ತರದಲ್ಲಿ ತೇಲಾಡಿಸಲಾಗುತ್ತದೆ. ಬೆಳಗ್ಗೆ 7 ಗಂಟೆ ಹೊತ್ತಿಗೆ ಸಫಾರಿ ಆರಂಭಿಸಲಾಗುತ್ತದೆ. ಬಿಲ್ ಹಾರೂಪ್ ಬಲೂನ್ ಸಫಾರಿ 2006ರಲ್ಲಿ ಆರಂಭವಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಒಂದು ಕಡೆ ಮೇಲೇರುವ ಬಲೂನ್‌ಗಳನ್ನು 3-4 ಕಿಮೀ ದೂರದಲ್ಲಿ ಕೆಳಗಿಳಿಸಲಾಗುತ್ತದೆ. ಅಲ್ಲಿಂದ ಪ್ರವಾಸಿಗರನ್ನು ಕರೆದೊಯ್ಯಲು ಅವರದ್ದೆ ಸುಸಜ್ಜಿತ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯೇ ರೆಸಾರ್ಟ್ ಕೂಡ ಇದ್ದು ಮುಂಜಾನೆಯ ಬ್ರೇಕ್‌ಫಾಸ್ಟ್ ಕೂಡ ನೀಡಲಾಗುತ್ತದೆ. ಸಫಾರಿಯಲ್ಲಿ ಪಾಲ್ಗೊಂಡವರಿಗೆ ಬಿಲ್ ಹಾರೂಪ್ ಸರ್ಟಿಫಿಕೇಟ್ ಕೊಟ್ಟು ಖುಷಿಪಡಿಸುತ್ತಾರೆ.
==============
ಗಾರ್ಡನ್ ರೂಟ್ ಎಂಬ ಅದ್ಭುತ ಪ್ರಪಂಚ:
••••••••••••••••
ದಕ್ಷಿಣ ಆಫ್ರಿಕಾದ ಮತ್ತೊಂದು ಆಕರ್ಷಣೆ ಗಾರ್ಡನ್ ರೂಟ್ ಎಂಬ ಅದ್ಭುತ ಮಾರ್ಗ. ಸುಮಾರು 300ಕಿಮೀ ಸಾಗುವ ಈ ಪ್ರದೇಶದಲ್ಲಿ ಜೀವನದಲ್ಲಿ ಎಂದೂ ಮರೆಯಲಾರದ ಕೌತುಕಗಳು ತುಂಬಿಕೊಂಡಿವೆ. ತಂಪಾದ ಹವಾಗುಣಗಳಿಂದ ಕೂಡಿದ ಈ ಪ್ರದೇಶ ಇನ್ನೊಂದು ದಿಕ್ಕಿನಲ್ಲಿರುವ ಜೋಹಾನ್ಸಬರ್ಗ ಪ್ರದೇಶಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಒಂದು ಹೊಸಲೋಕಕ್ಕೇ ಹೋದ ಅನುಭವ. ಸಮುದ್ರದ ಅಂಚಿನಲ್ಲೇ ಸಾಗುವ ಈ ಮಾರ್ಗ ಕ್ಷ ಣ ಕ್ಷ ಣಕ್ಕೂ ಅಚ್ಛರಿಗಳನ್ನು ತೆರೆದಿಡುತ್ತ ಸಾಗುತ್ತದೆ. ಕಾಂಗೋ ಗುಹೆಗಳು, ಟ್ಸಿಟ್ಸಿಕಮ್ಮ ನ್ಯಾಶನಲ್ ಪಾರ್ಕ್, ಅಲ್ಲಿನ ಸಸ್ಪೆನ್ಶನ್ ಬ್ರಿಜ್, ಹಸಿರು -ನೀಲಿ ಮಿಶ್ರಿತ ಸುಂದರವಾದ ಸಮುದ್ರ, ನ್ಯಾಸ್ನಾ ಎಂಬ ಸೋಜಿಗ ಎಲ್ಲವೂ ಇಲ್ಲಿದೆ. ಒಂದು ಕಡೆ ಸಮುದ್ರ ಇನ್ನೊಂದು ಕಡೆ ಕಾಡು -ಅವುಗಳ ಅಂಚಿನಲ್ಲಿ ಸಾಗುವಾಗಲಂತೂ ಅದ್ಭುತ ನಿಸರ್ಗಲೋಕವೇ ತೆರೆದುಕೊಳ್ಳುತ್ತ ಸಾಗುತ್ತದೆ. ಅಲ್ಲಿನ ಪ್ರಾಣಿ-ಪಕ್ಷಿಗಳು, ಹೂವುಗಳು, ಅಪರೂಪದ ಸಸ್ಯರಾಶಿಗಳು, ಸಮುದ್ರದಲ್ಲಿ ಕಾಣಸಿಗುವ ಈ ಪ್ರದೇಶದ ನಗರಗಳು, ಮನೆಗಳು, ಜನಜೀವನ, ವಾಹನ ಸಂಚಾರ ಎಲ್ಲವೂ ದಕ್ಷಿಣ ಆಫ್ರಿಕಾದ ಇತರ ಪ್ರದೇಶಗಳಿಗಿಂತ ತೀರಾ ಭಿನ್ನವಾಗಿ ಕಾಣಲ್ಪಡುತ್ತವೆ. ಜಿಪ್ ಲೈಯಿಂಗ್, ಕ್ವಾಡ್ ಬೈಕಿಂಗ್, ಸೈಡ್ ಕಾರ್ ಪ್ರಯಾಣ, ಬಂಗಿ ಜಂಪ್ ಮೊದಲಾದ ಸಾಹಸ ಕ್ರೀಡೆಗಳೂ ಗಾರ್ಡನ್‌ರೂಟ್‌ನಲ್ಲಿ ಹೊಸದಾದ ಪ್ರಪಂಚಕ್ಕೇ ಕೊಂಡೊಯ್ಯಬಲ್ಲ ಸಾಹಸಕ್ರೀಡೆಗಳು ಈ ರೂಟ್‌ನಲ್ಲಿವೆ.
============
ಕೇಪ್ ಟೌನ್ ಎಂಬ ಅಪರೂಪದ ನಗರ, ಕೇಪ್ ಆಫ್ ಗುಡ್ ಹೋಪ್ ಎಂಬ ಹಿಂದೂ ಮಹಾಸಾಗರ ಮತ್ತು ಅಟ್ಲಾಂಟಿಕ್ ಮಹಾಸಾಗರದ ಸಂಗಮ ಪ್ರವಾಸಿಗರ ಹೊಟ್ಟೆ ತುಂಬುವಷ್ಟು ಕಟ್ಟಿಕೊಡುತ್ತದೆ. ಕೇಪ್‌ಟೌನ್‌ನ ಟೇಬಲ್ ಮೌಂಟೇನ್ ಮತ್ತು ಅದನ್ನು ಏರಲು ಇರುವ ಕೇಬಲ್ ಕಾರ್ ಬೆರಗುಗೊಳಿಸುತ್ತವೆ.
===============
ಸೋಮವಾರ, ಮಾರ್ಚ್ 26, 2018
ಉಪಯುಕ್ತ ಮಾಹಿತಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ