ಭಾನುವಾರ, ಮಾರ್ಚ್ 25, 2018

ವಿಶ್ವದ ಅತ್ಯಂತ ಪ್ರಾಚೀನ ನಗರ ಇನ್ನು ವೈರ್‌ಲೆಸ್

===========
ವಾರಣಾಸಿ, ಮಾ. 25: ವಿದ್ಯುತ್ ಸಂಪರ್ಕ ಪಡೆದ 86 ವರ್ಷಗಳ ಬಳಿಕ ಪ್ರಾಚೀನ ನಗರವಾದ ವಾರಣಾಸಿ ಇದೀಗ ವಿದ್ಯುತ್ ತಂತಿ ರಹಿತ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 16 ಚದರ ಕಿಲೋಮೀಟರ್ ವ್ಯಾಪ್ತಿಯ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಇದೀಗ ತೆರವುಗೊಳಿಸಲಾಗಿದೆ.
========
ವಿಶ್ವದ ಈ ಪ್ರಾಚೀನ ನಗರದ ಅಗಲ ಕಿರಿದಾದ ಲೇನ್‌ಗಳಲ್ಲಿ ವಾಸವಿರುವ 50 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ಭೂಗತ ಕೇಬಲ್ ಮೂಲಕ ವಿದ್ಯುತ್ ಒದಗಿಸುವ ಕಾಮಗಾರಿ ಸವಾಲಿನದ್ದಾಗಿತ್ತು. ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅಡಿಯಲ್ಲಿ ಪವರ್‌ಗ್ರಿಡ್ ಎಂಬ ಕಂಪೆನಿ ಈ ಕಾಮಗಾರಿ ನಿರ್ವಹಿಸಿದೆ.
=========
"ಭೌಗೋಳಿಕ ಅಂಶಗಳ ಪ್ರಕಾರ ಸಿಯೋಲ್ ಮತ್ತು ಟರ್ಕಿಯ ನದಿದಂಡೆಯ ಕೆಲ ನಗರಗಳು ಸಂಕೀರ್ಣ ಎಂದು ಪರಿಗಣಿಸಲಾಗಿದೆ.
========
ವಾರಣಾಸಿಯಲ್ಲಿ ಐಪಿಡಿಎಸ್ ಯೋಜನೆ ಅನುಷ್ಠಾನಗೊಳಿಸುವಾಗ, ಭೂಗತ ಕೇಬಲ್ ಅಳವಡಿಸುವ ಮೂಲಸೌಕರ್ಯ ನಿರ್ಮಿಸುವಾಗ, ಇದು ಅತ್ಯಂತ ಸಂಕೀರ್ಣ ನಗರ ಎನ್ನುವುದು ಮನವರಿಕೆಯಾಯಿತು ಎಂದು ಪವರ್‌ಗ್ರಿಡ್ ಯೋಜನಾ ನಿರ್ದೇಶಕ ಸುಧಾಕರ್ ಗುಪ್ತಾ ಹೇಳಿದರು.
=============
ಎರಡು ವರ್ಷದಲ್ಲಿ ಕಂಪೆನಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿದೆ. 2015ರ ಜೂನ್‌ನಲ್ಲಿ ಕೇಂದ್ರ ವಿದ್ಯುತ್ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೋಯಲ್ ಅವರು ಐಪಿಡಿಎಸ್ ಯೋಜನೆಯಡಿ ವಾರಣಾಸಿಯಲ್ಲಿ ಭೂಗತ ಕೇಬಲ್ ಅಳವಡಿಸುವ 432 ಕೋಟಿ ರೂಪಾಯಿಯ ಯೋಜನೆಯನ್ನು ಘೋಷಿಸಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದ ವಿವಿಧೆಡೆ 45 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಐಪಿಡಿಎಸ್ ಯೋಜನೆಯನ್ನು ವಾರಾಣಾಸಿಯಲ್ಲಿ ಘೋಷಿಸಿದ್ದರು. ಪೈಲಟ್ ಯೋಜನೆಯನ್ನು ಕಬೀರ್‌ನಗರ ಮತ್ತು ಅನ್ಸಾರ್‌ಬಾದ್‌ನಲ್ಲಿ ಆರಂಭಿಸಲಾಗಿತ್ತು.
============
ಯೋಜನೆಯಡಿ 11 ವಿದ್ಯುತ್ ಉಪಕೇಂದ್ರಗಳನ್ನು ಆಧುನೀಕರಿಸಲಾಗಿದ್ದು, ಎರಡು ಹೊಸ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಅಳವಡಿಸಿರುವ ಒಳಚರಂಡಿ, ನೀರು ಸರಬರಾಜು, ಬಿಎಸ್ಸೆನ್ನೆಲ್ ಮತ್ತಿತರ ಕೇಬಲ್‌ಗಳ ನಡುವೆ ವಿದ್ಯುತ್ ಕೇಬಲ್ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. ಈ ಕೇಬಲ್‌ಗಳ ನಕ್ಷೆ ಕೂಡಾ ಇಲ್ಲದ ಹಿನ್ನೆಲೆಯಲ್ಲಿ ಪವರ್‌ಗ್ರಿಡ್ ಕಾರ್ಮಿಕರು ಅಗೆಯುವ ವೇಳೆ ಅವುಗಳಿಗೆ ಹಾನಿಯಾಗುತ್ತಿತ್ತು. ಇವುಗಳಿಗೆ ಪರಿಹಾರ ನೀಡಿದ ಬಳಿಕವಷ್ಟೇ ಕಾಮಗಾರಿ ಮುಂದುವರಿಯಬೇಕಿತ್ತು ಎಂದು ವಿವರಿಸಿದರು.
===========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ