ಮಂಗಳವಾರ, ಮಾರ್ಚ್ 27, 2018

ಡೇ ಸ್ಪೆಷಲ್‌: ಪರ್ಪಲ್‌ ಡೇ

==========
ಅಪಸ್ಮಾರ ಅಥವಾ ಎಪಿಲೆಪ್ಸಿ ಕಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 26ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಪರ್ಪಲ್‌ ಡೇ ಆಚರಿಸಲಾಗುತ್ತದೆ. ಅಪಸ್ಮಾರ ಕಾಯಿಲೆಯನ್ನು ಪ್ರತಿನಿಧಿಸುವ ಬಣ್ಣ ಪರ್ಪಲ್‌ ಅಥವಾ ನೇರಳೆ. ಪರ್ಪಲ್‌ ಬಣ್ಣದ ಬಟ್ಟೆ ಧರಿಸಿ ಅಪಸ್ಮಾರ ಕಾಯಿಲೆಯ ಬಗ್ಗೆ ಹಾಗೂ ಅದರ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
================
ಅಪಸ್ಮಾರ ಮೆದುಳಿನ ನರ ಸಮಸ್ಯೆಯಾಗಿದೆ. ಅಪಸ್ಮಾರವನ್ನು ಇಂಗ್ಲಿಷ್‌ನಲ್ಲಿ ಎಪಿಲೆಪ್ಸಿ ಅಥವಾ ಪಿಟ್ಸ್‌ ಎಂದು ಕರೆಯಲಾಗುತ್ತದೆ. ಅಪಸ್ಮಾರಕ್ಕೆ ಹಲವಾರು ಕಾರಣಗಳಿವೆ. ಅನುವಂಶಿಯತೆ, ಜನನ ಕಾಲದಲ್ಲಾಗುವ ತೊಂದರೆ, ವಿಪರೀತ ಜ್ವರ, ಮಿದುಳಿಗೆ ಆಗುವ ಗಾಯ, ಲಕ್ವ,ಬ್ರೈನ್‌ ಟ್ಯೂಮರ್‌, ಮಿದುಳಿನ ಸೋಂಕು ಇತ್ಯಾದಿಗಳಿಂದ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಈ ಕಾಯಿಲೆಯಿರುವ ವ್ಯಕ್ತಿಗಳಲ್ಲಿ ಆಗಾಗ ಮೂರ್ಛೆ ತಪ್ಪಿ ಬೀಳುವುದು, ಮೈ ನಡುಕ ಬರುವುದು, ಬಾಯಿ ಕಚ್ಚಿಕೊಳ್ಳುವುದು ಇತ್ಯಾದಿ ಲಕ್ಷ ಣಗಳು ಕಂಡು ಬರುತ್ತವೆ. ಇದನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು.
===============
ಜಗತ್ತಿನಾದ್ಯಂತ 65 ಮಿಲಿಯನ್‌ ಮಂದಿ ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆಯ ಪ್ರತಿ ನೂರರಲ್ಲಿ ಒಬ್ಬರು ಅಪಸ್ಮಾರ ಬಾಧೆಯಿಂದ ಬಳಲುತ್ತಿದ್ದಾರೆ. ಭಾರತ ದೇಶದಲ್ಲಿ ಸುಮಾರು 12 ಮಿಲಿಯನ್‌ ಮಂದಿ ಈ ಅಪಸ್ಮಾರ ರೋಗದಿಂದ ಬಳಲುತ್ತಿದ್ದಾರೆ. ಅಪಸ್ಮಾರ ಸಂಘದ ಜತೆಗೂಡಿ ಈ ಕಾಯಿಲೆಯಿಂದ ಬಳಲುತ್ತಿದ್ದ 9 ವರ್ಷದ ಕಾಸಿಡಿ ಮೆಗಾನ್‌ ಎಂಬ ಕೆನಡಾ ದೇಶದ ಬಾಲಕಿ ಈ ಪರ್ಪಲ್‌ ಡೇಯನ್ನು ಸ್ಥಾಪಿಸಿದಳು. ಈ ದಿನಾಚರಣೆಯನ್ನು 2008ರಲ್ಲಿ ಆರಂಭಿಸಲಾಯಿತು. ಈ ದಿನದಂದು ರನ್ನಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌, ಪೇಟಿಂಗ್‌ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ