ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಅತಿ ಹೆಚ್ಚಾಗಿ ಮಹಿಳೆಯರ ಶೋಷಣೆಗೆ ಕಾರಣವಾಗಿರುವ ಪಿಡುಗು. ಇದನ್ನು ನಿಯಂತ್ರಿಸುವುದಕ್ಕಾಗಿ 1961 ರಷ್ಟು ಹಿಂದೆಯೇ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂತು. ಆದರೆ ಇದರಿಂದ ಈ ಪಿಡುಗನ್ನು ನಿವಾರಿಸುವುದಿರಲಿ ನಿಯಂತ್ರಿಸಲೂ ಸಾಧ್ಯವಾಗಲಿಲ್ಲ. ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಮತ್ತು ವರದಕ್ಷಿಣೆ ಸಾವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 1984ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ತರಲಾಯಿತು. ಈ ಕಾನೂನಿನ ಪ್ರಕಾರ-
=========
* ವರದಕ್ಷಿಣೆ ಕೊಡುವುದು, ಕೇಳುವುದು, ತೆಗೆದುಕೊಳ್ಳುವುದು ಮತ್ತು ವರದಕ್ಷಿಣೆ ಕೊಡುವುದಾಗಿ ಜಾಹೀರಾತು ಕೊಡುವುದು ಅಪರಾಧ.
=======
* ವರದಕ್ಷಿಣೆ ನೀಡುವ ಮತ್ತು ತೆಗೆದುಕೊಳ್ಳುವ ಅಪರಾಧಕ್ಕೆ ಶಿಕ್ಷೆ-ಕನಿಷ್ಠ ಐದು ವರ್ಷಗಳ ಕಾರಾವಾಸ ಮತ್ತು 15,000 ರೂಗಳವರೆಗೆ ಜುಲ್ಮಾನೆ.
=========
* ವರದಕ್ಷಿಣೆ ಕೇಳುವ ಅಪರಾಧಕ್ಕೆ ಶಿಕ್ಷೆ-ಕನಿಷ್ಠ ಎರಡು ವರ್ಷಗಳ ಕಾರಾವಾಸ ಮತ್ತು 10,000 ರೂಗಳ ವರೆಗೆ ಜುಲ್ಮಾನೆ.
ಈ ಪಿಡುಗು ತೊಲಗಬೇಕಾದರೆ ಜನ ಜಾಗೃತಿ ಹಾಗೂ ಸಹಕಾರ ಮುಖ್ಯ
========
ದೂರು:
* ದೂರು ನೀಡುವ ವ್ಯಕ್ತಿ: ವರದಕ್ಷಿಣೆ ಬೇಡಿಕೆಯಿಂದ ತೊಂದರೆಗೆ ಒಳಗಾದ ವ್ಯಕ್ತಿ, ಅಥವಾ ಅಂಥ ವ್ಯಕ್ತಿಯ ತಂದೆ, ತಾಯಿ ಅಥವಾ ಆ ವ್ಯಕ್ತಿಯ ಯಾರೇ ಸಂಬಂಧಿ ಅಥವಾ ಮಾನ್ಯತೆ ಪಡೆದ ಯಾವುದೇ ಸ್ವಯಂ ಸೇವಾ ಸಂಘ/ಸಂಸ್ಥೆ ಲಿಖಿತ ದೂರು ನೀಡಬಹುದು.
=========
* ದೂರು ಸ್ವೀಕರಿಸುವ ಅಧಿಕಾರಿಗಳು: ಜಿಲ್ಲಾ ಮಟ್ಟದಲ್ಲಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರು/ಉಪ-ನಿರ್ದೇಶಕರು; ತಾಲೂಕುಗಳಲ್ಲಿ, ಆ ಇಲಾಖೆಯ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ತಹಸೀಲ್ದಾರರು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಮುಖ್ಯ ವರದಕ್ಷಿಣೆ ನಿಷೇಧ ಅಧಿಕಾರಿಗಳಾಗಿರುತ್ತಾರೆ.
=============
ಘೋಷಣಾ ಪ್ರಮಾಣ ಪತ್ರ: ಪ್ರತಿಯೊಬ್ಬ ಸರ್ಕಾರಿ ನೌಕರನೂ ವಿವಾಹದ ನಂತರ ತಾನು ವರದಕ್ಷಿಣೆ ತೆಗೆದುಕೊಂಡಿಲ್ಲವೆಂದು ಘೋಷಿಸುವ ಪ್ರಮಾಣ ಪತ್ರವನ್ನು ಇಲಾಖೆ ಮುಖ್ಯಸ್ಥರಿಗೆ ನೀಡಬೇಕು ಮತ್ತು ಇದಕ್ಕೆ ಪತ್ನಿ, ತಂದೆ ಹಾಗೂ ಮಾವನ ಸಾಕ್ಷಿಯಿರಬೇಕು.
============
ವರದಕ್ಷಿಣೆ ಸಾವು: ವರದಕ್ಷಿಣೆ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹಾಗೂ ವರದಕ್ಷಿಣೆಗಾಗಿ ವಧೂದಹನ ಪ್ರಕರಣಗಳು ಹೆಚ್ಚಾದುದರಿಂದ, ಅಂಥ ಸಾವುಗಳನ್ನು ‘ವರದಕ್ಷಿಣೆ ಸಾವು’ಗಳೆಂದು ಗುರುತಿಸಿ, ಭಾರತ ದಂಡ ಸಂಹಿತೆಯ 304 ಬಿ ಪ್ರಕರಣದ ಅಡಿಯಲ್ಲಿ ಅದನ್ನು ಒಂದು ಪ್ರತ್ಯೇಕ ಅಪರಾಧವನ್ನಾಗಿ ಮಾಡಲಾಯಿತು.
==============
ವರದಕ್ಷಿಣೆ ಪಡೆದು ಮದುವೆಯಾಗುವುದು ಮತ್ತು ವರದಕ್ಷಿಣೆ ನೀಡಿ ಮದುವೆಯಾಗುವುದು ಎರಡೂ ಅವಮಾನಕರ ಎಂಬ ಭಾವ ನಮ್ಮ ತರುಣ ತರುಣಿಯರಲ್ಲಿ ಮೂಡಬೇಕು, ವರದಕ್ಷಿಣೆ ಬೇಡುವವರಿಗೆ ಹೆಣ್ಣು ಸಿಗದ ಪರಿಸ್ಥಿತಿ ಮತ್ತು ಅವರವರ ಸಮುದಾಯದಿಂದ ಬಹಿಷ್ಕೃತರಾಗುವ ಪರಿಸ್ಥಿತಿ ನಿರ್ಮಾಣವಾಗಬೇಕು.
============
ವರದಕ್ಷಿಣೆ ಬೇಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ನೀಡಬೇಕು. ನೀಡುವವರಿಲ್ಲದಿದ್ದರೆ ತೆಗೆದು ಕೊಳ್ಳುವವರ ಪೀಳಿಗೆ ಬೆಳೆಯಲಾರದು. ಆದರೆ ವರದಕ್ಷಿಣೆ ನೀಡಿಯಾದರೂ ಸರಿ ಹೆಣ್ಣು ಮಗಳ ಮದುವೆ ಮಾಡಬೇಕು, ಜವಾಬ್ದಾರಿ ಕಳೆದುಕೊಳ್ಳ ಬಿಡಬೇಕು ಎಂಬ ಹೆಣ್ಣು ಹೆತ್ತವರ ಮನೋಭಾವ ವರದಕ್ಷಿಣೆ ನೀಡಿಕೆಗೆ ಕಾರಣ. ಇಂಥ ಮನೋಭಾವಕ್ಕೆ ಕಾರಣ ನಮ್ಮ ಸಮಾಜ.
================
ನಾವೆಲ್ಲರೂ ನಮ್ಮ ಸಮಾಜದ ಭಾಗಗಳು. ನಾವು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರುವುದು ಸಾಧ್ಯ. ವರದಕ್ಷಿಣೆ ಬೇಡಿದರೆಂಬ ಕಾರಣಕ್ಕೆ ವರನನ್ನು ಧಿಕ್ಕರಿಸಿ ಹಸೆ ಮಣೆಯ ಮೇಲಿಂದ ಎದ್ದು ಬಂದ ತರುಣಿಯರು ಆದರ್ಶವಾಗಬೇಕು. ಇದಕ್ಕೆ ಹೆಣ್ಣು ಹೆತ್ತವರು ಬೆಂಬಲಿಸಬೇಕು. ಇದು ಆಂದೋಲನವಾಗಬೇಕು.
=============
ಶನಿವಾರ, ಮಾರ್ಚ್ 24, 2018
ವರದಕ್ಷಿಣೆ ಮತ್ತು ಕಾನೂನು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ