ಶನಿವಾರ, ಮಾರ್ಚ್ 24, 2018

ವ್ಯಕ್ತಿ ವಿಶೇಷತೆ

ಪತ್ರಕರ್ತೆ ರಾಜಕೀಯ ಪಾತ್ರ
================
ಪಾಕಿಸ್ತಾನದಲ್ಲಾಗುವ ಪ್ರಮುಖ ಬೆಳವಣಿಗೆಗಳು ಬಹುಬೇಗ ಗಮನಸೆಳೆಯುತ್ತವೆ. ಅಂತಹ ಒಂದು ವಿದ್ಯಮಾನ ಪಾಕಿಸ್ತಾನದ ಸೆನೆಟ್(ಸಂಸತ್ತಿನ ಮೇಲ್ಮನೆ)ನ ವಿಪಕ್ಷ ನಾಯಕ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದು. ಭುಟ್ಟೋ ಕುಟುಂಬದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ವಿಪಕ್ಷ ಸ್ಥಾನದಲ್ಲಿರುವ ಸೆನೆಟ್​ನಲ್ಲಿ ಆ ಪಕ್ಷದ ನಾಯಕಿಯಾಗಿ ಶೆರ್ರಿ ರೆಹಮಾನ್ ಆಯ್ಕೆಯಾಗಿದ್ದಾರೆ. ಶೆರ್ರಿ ಜಾಗತಿಕವಾಗಿ ಗಮನಸೆಳೆದ ರಾಜಕಾರಣಿ, ರಾಜತಾಂತ್ರಿಕ ಅಧಿಕಾರಿ. ಪತ್ರಕರ್ತೆಯಾಗಿದ್ದವರು ಕೂಡ.
===≠=======
ಪಾಕಿಸ್ತಾನದ ಸೆನೆಟ್​ನ ಒಟ್ಟು ಸದಸ್ಯ ಬಲ 104. ವಿಪಕ್ಷ ನಾಯಕ ಸ್ಥಾನ ಚುನಾವಣೆಯಲ್ಲಿ ಪಿಪಿಪಿಯ ಶೆರ್ರಿಗೆ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್(ಪಿಟಿಐ)ನ ಅಜಾಂ ಸ್ವಾತಿ ಪ್ರತಿಸ್ಪರ್ಧಿಯಾಗಿದ್ದರು. ಶೆರ್ರಿಗೆ 34 ಮತ ಬಿದ್ದರೆ, ಸ್ವಾತಿಗೆ 19 ಮತಗಳಷ್ಟೇ ದಕ್ಕಿದವು. ಪಿಟಿಐ ಸದಸ್ಯ ಬಲ 13. ಉಳಿದ ಮತಗಳು ಇತರೆ ಸಣ್ಣ ಪಕ್ಷಗಳ ಸದಸ್ಯರದ್ದು. ಸೆನೆಟ್​ನಲ್ಲಿ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಮತ್ತು ಮಿತ್ರ ಪಕ್ಷಗಳ ಸದಸ್ಯ ಬಲ 47. ಇತ್ತೀಚೆಗಷ್ಟೇ ನಡೆದ ಸೆನೆಟ್ ಚೇರ್​ವುನ್, ಡೆಪ್ಯುಟಿ ಚೇರ್​ವುನ್ ಸ್ಥಾನಗಳ ಚುನಾವಣೆಯಲ್ಲೂ ಪಿಪಿಪಿ ಗೆಲುವು ದಾಖಲಿಸಿತ್ತು. ಅದೂ ಅಲ್ಲದೆ, ಕೃಷ್ಣಾ ಕೊಲ್ಹಿ ಎಂಬ ಮೊದಲ ಹಿಂದು ದಲಿತ ಮಹಿಳೆಯನ್ನು ಸೆನೆಟ್​ಗೆ ಆಯ್ಕೆ ಮಾಡಿಸುವಲ್ಲಿಯೂ ಯಶಸ್ವಿಯಾಗಿತ್ತು.
==========
ಶೆಹರ್​ಬಾನೋ ರೆಹಮಾನ್ ಎಂಬುದು ಅವರ ನಿಜ ನಾಮಧೇಯ. ಶೆರ್ರಿ ರೆಹಮಾನ್ ಎಂದೇ ಪ್ರಸಿದ್ಧರು. ಕರಾಚಿಯ ಪ್ರಸಿದ್ಧ ಸಿಂಧಿ ಕುಟುಂಬದಲ್ಲಿ 1960ರ ಡಿಸೆಂಬರ್ 21ರಂದು ಜನನ. ತಂದೆ ಹಸ್ಸನಾಲಿ ಎ ರೆಹಮಾನ್ ವೃತಿಯಲ್ಲಿ ವಕೀಲ, ಶಿಕ್ಷಕ. ಕರಾಚಿಯ ಸಿಂಧ್ ಮುಸ್ಲಿಂ ಗವರ್ನಮೆಂಟ್ ಲಾ ಕಾಲೇಜ್​ನ ಸಂಸ್ಥಾಪಕ. ಸಮುದಾಯದ ಜನಪ್ರಿಯ ನಾಯಕರಾಗಿದ್ದವರು. ಜಾಮ್ಶೋರೊದಲ್ಲಿನ ಸಿಂಧ್ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ಕೂಡ ಆಗಿದ್ದರು. ತಾಯಿ ಶಂಶಾದ್ ಅಖ್ತರ್- ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮೊದಲ ನಿರ್ದೇಶಕಿ (1980) ಆಗಿದ್ದರು. ಸಿಂಧ್ ಮತ್ತು ಬಲೂಚಿಸ್ತಾನ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿವಂಗತ ತುಫೈಲ್ ಅಲಿ ಅಬ್ದುಲ್ ರೆಹಮಾನ್ ಅವರು ಶೆರ್ರಿಯ ಚಿಕ್ಕಪ್ಪ. ಶೆರ್ರಿ ಅಮೆರಿಕದ ಸ್ಮಿತ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, 1985ರಲ್ಲಿ ಪದವಿ ಪಡೆದರು. ಪಾಶ್ಚಿಮಾತ್ಯ ಶಿಕ್ಷಣಕ್ಕಾಗಿ ವಿಶೇಷವಾಗಿ ಕಲೆ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಅಧ್ಯಯನಕ್ಕಾಗಿ ಬ್ರಿಟನ್​ನ ಸಸೆಕ್ಸ್ ಯೂನಿವರ್ಸಿಟಿಗೆ ಸೇರ್ಪಡೆಗೊಂಡರು. ನಂತರ ಪಾಕಿಸ್ತಾನಕ್ಕೆ ಹಿಂತಿರುಗಿದ ಶೆರ್ರಿ, ವೃತ್ತಿಪರ ಪತ್ರಕರ್ತರಾದರು. ದ ಡೇಲಿ ಸ್ಟಾರ್ ಪತ್ರಿಕೆಯಲ್ಲಿ ಮೊದಲ ಕೆಲಸ. ನಂತರ ಸೇರಿದ್ದು ದ ಹೆರಾಲ್ಡ್ ಪತ್ರಿಕೆಗೆ. 26ನೇ ವಯಸ್ಸಿನಲ್ಲೇ ಆ ಪತ್ರಿಕೆಯ ಮುಖ್ಯಸಂಪಾದಕಿಯಾಗಿ 1998ರ ತನಕ ಮುಂದುವರಿದರು. ಬಳಿಕ ಆ ಉದ್ಯೋಗ ತ್ಯಜಿಸಿದ ಅವರು, ‘ದ ಕಾಶ್ಮೀರಿ ಶಾಲ್; ಫ್ರಂ ಜಮಾವರ್ ಟು ಪೈಸ್ಲೇ’ ಎಂಬ ಪುಸ್ತಕದ ಸಹ ಲೇಖಕಿಯಾಗಿದ್ದರು. ಒಟ್ಟು 20 ವರ್ಷ ವೃತ್ತಿಪರ ಪತ್ರಕರ್ತೆಯಾಗಿದ್ದ ಅವರು, 1988ರಿಂದ 1998ರ ತನಕ ಕೌನ್ಸಿಲ್ ಆಫ್ ಪಾಕಿಸ್ತಾನ್ ನ್ಯೂಸ್ ಪೇಪರ್ ಎಡಿಟರ್ಸ್​ನ ಸದಸ್ಯ ರಾಗಿದ್ದರು. 1999ರಲ್ಲಿ ಟಿವಿ ಚಾನೆಲ್ ಒಂದರಲ್ಲಿ ಪ್ರಚಲಿತ ವಿದ್ಯಮಾನಗಳ ಕಾರ್ಯ ಕ್ರಮದ ನಿರೂಪಕಿಯಾಗಿದ್ದರು.
===========
ನಂತರದಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಅವರು, ಪಿಪಿಪಿಯನ್ನು ಸೇರಿಕೊಂಡರು. 2002ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲ್ ಅಸೆಂಬ್ಲಿಗೆ ಸ್ಪರ್ಧಿಸಿ ಗೆಲುವು ಕಂಡರು. ಈ ಅವಧಿಯಲ್ಲಿ ಅವರು ಪಕ್ಷದ ಕೇಂದ್ರೀಯ ಮಾಹಿತಿ ಅಧಿಕಾರಿಯಾಗಿ, ನೀತಿ ಯೋಜನಾ ವಿಭಾಗದ ಅಧ್ಯಕ್ಷರಾಗಿ, ವಿದೇಶ ಸಂಬಂಧ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರ ಸಿಂಧ್​ನಿಂದ ಸ್ಪರ್ಧಿಸಿ ಆಯ್ಕೆಯಾದರು. ಈ ಎರಡನೇ ಅವಧಿಯಲ್ಲಿ ಅಸೆಂಬ್ಲಿಯಲ್ಲಿ ಮಂಡಿಸಲ್ಪಟ್ಟ ಅನೇಕ ಶಾಸನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಷ್ಟೇ ಅಲ್ಲ, ಅಂದಿನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಸಚಿವ ಸಂಪುಟದಲ್ಲಿ ವಾರ್ತಾ ಪ್ರಸಾರ ಸಚಿವರ ಹೊಣೆಗಾರಿಕೆಯನ್ನೂ ನಿಭಾಯಿಸಿದರು. ಇದರ ಬೆನ್ನಲ್ಲೇ ಅವರಿಗೆ ಆರೋಗ್ಯ ಮತ್ತು ಮಹಿಳಾ ಅಭಿವೃದ್ಧಿ ಖಾತೆಯ ಹೊಣೆಗಾರಿಕೆಯನ್ನೂ ವಹಿಸಲಾಗಿತ್ತು. 2008ರ ಆಗಸ್ಟ್ ತನಕ ಸಂಸ್ಕೃತಿ ಖಾತೆ ಸಚಿವರಾಗಿದ್ದರು. 2009ರ ಮಾರ್ಚ್​ನಲ್ಲಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಮುಂದಾದಾಗ ಅದನ್ನು ವಿರೋಧಿಸಿದ ಶೆರ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
=============
ಸಚಿವರಾಗಿದ್ದ ಅವಧಿಯಲ್ಲಿ, ಮಹಿಳಾ ಸಬಲೀಕರಣ ಮಸೂದೆ, ಮರ್ಯಾದಾ ಹತ್ಯೆ ತಡೆ ಮಸೂದೆ, ಕೌಟುಂಬಿಕ ಹಿಂಸಾಚಾರ ತಡೆ ಮಸೂದೆ ಮುಂತಾದ ಮಹಿಳಾ ಪರ ಮಸೂದೆಗಳನ್ನು ಸಿದ್ಧಪಡಿಸಿದ್ದರು. ಇದಲ್ಲದೇ, ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾಹಿತಿ ಸ್ವಾತಂತ್ರ್ಯದ ಮಸೂದೆ ಮತ್ತು ಪತ್ರಿಕಾ ಕಾಯ್ದೆಯನ್ನು ಮಂಡಿಸಿದ್ದರು. ಇದು, 1999ರ ಪತ್ರಿಕಾ ಸುಗ್ರೀವಾಜ್ಞೆ ಸಂದರ್ಭ ಪತ್ರಕರ್ತರ ಬಂಧನವನ್ನು ತಡೆಯುವಂಥದ್ದು. ಹೀಗೆ ಪ್ರತಿಯೊಂದು ಹಂತದಲ್ಲೂ ಮಹಿಳಾ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ತೀವ್ರವಾಗಿ ಪ್ರತಿಪಾದಿಸುತ್ತ ಬಂದರು.
==========
2011ರಲ್ಲಿ ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿ ಹುಸೈನ್ ಹಖ್ಖಾನಿ ವಿರುದ್ಧ ‘ಮೆಮೋಗೇಟ್’ ವಿವಾದ(ಒಸಾಮಾ ಬಿನ್ ಲಾಡೆನ್ ಹತ್ಯೆ ನಂತರದಲ್ಲಿ ಪಾಕಿಸ್ತಾನ ಸೇನೆ ಆಡಳಿತ ವಶಪಡಿಸಿಕೊಳ್ಳುವ ಆತಂಕ ವ್ಯಕ್ತವಾಗಿತ್ತು. ಆಗ, ಅಮೆರಿಕದಲ್ಲಿ ಪಾಕ್​ನ ರಾಯಭಾರಿಯಾಗಿದ್ದ ಹಖ್ಖಾನಿ ಅವರು ಒಬಾಮಾ ಸರ್ಕಾರದ ನೆರವು ಕೋರಿ ಅಡ್ಮಿರಲ್ ಮೈಕ್ ಮುಲ್ಲೆನ್​ಗೆ ಬರೆದ ಮೆಮೋ ವಿವರ ಬಹಿರಂಗವಾಗಿ ಉಂಟಾದ ವಿವಾದ) ಉದ್ಭವಿಸಿದಾಗ ಅವರನ್ನು ಹಿಂದಕ್ಕೆ ಕರೆಯಿಸಿಕೊಂಡ ಸರ್ಕಾರ, ಶೆರ್ರಿಯನ್ನು ನೇಮಕ ಮಾಡಿತು. 2011ರ ನವೆಂಬರ್ 24ರಿಂದ 2013ರ ಮೇ ತನಕ ಶೆರ್ರಿ ರಾಯಭಾರಿಯಾಗಿದ್ದರು. 2015ರ ಜೂನ್​ನಲ್ಲಿ ಸೆನೆಟ್​ಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಪಿಪಿಪಿ ಅಭ್ಯರ್ಥಿಯಾಗಿ ಸಿಂಧ್ ಕ್ಷೇತ್ರದಿಂದಲೇ ಆಯ್ಕೆಯಾದರು. ಈಗ ವಿಪಕ್ಷ ನಾಯಕಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಮೇಲಿನ ಹೊಣೆಗಾರಿಕೆಯೂ ಹೆಚ್ಚಾಗಿದೆ.
===========
ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಪತಿ ನದೀಮ್ ಹುಸೇನ್- ತಮೀರ್ ಮೈಕ್ರೋಫೈನಾನ್ಸ್ ಬ್ಯಾಂಕ್​ನ ಸಿಇಒ. ಮಗಳು ಮರ್ವಿ ಮಲಿಕ್. ಲೇಡಿ ಡಫರಿನ್ ಫೌಂಡೇಷನ್ ಟ್ರಸ್ಟ್​ನ ಮುಖ್ಯಸ್ಥೆಯಾಗಿ ಸಿಂಧ್ ಪ್ರಾಂತ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನೆರವಿನ ರೂಪದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಕರಾಚಿಯ ಸುಧಾರಣಾವಾದಿ ಚಿಂತಕರ ವೇದಿಕೆ ಜಿನ್ಹಾ ಇನ್​ಸ್ಟಿಟ್ಯೂಟ್​ನ ಗವರ್ನರ್​ಗಳ ಮಂಡಳಿಯ ಮುಖ್ಯಸ್ಥೆಯೂ ಆಗಿದ್ದಾರೆ.

=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ