*==ಜ್ಞಾನ ಮಂದಿರ==*
*ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..?*
===============
*ಸಮಾಸಗಳು : ಸಮಾಸ ಎಂದರೇನು ? ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ.*
==============
*ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ. ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ. ನಾಗವರ್ಮನ ಪ್ರಕಾರ, ‘ನಾಮವಾಚಿನಾಂ ಶಬ್ದನಾಂ ಪರಸ್ಪರಮನ್ವಯ ಸಿದ್ಧೋರ್ಥಸ್ಸಮಾಸ ಸಂಜ್ಞಸ್ಸ್ಯಾತ್’ (ಸೂತ್ರ : 131). ಎಂದರೆ ನಾಮವಾಚಿಯಾದ ಶಬ್ದಗಳೆರಡರ ಅನ್ವಯ ಸಿದ್ಧವಾದ ಅರ್ಥ. ನಾಮಪದಗಳು ಕೂಡಿ ನುಡಿಯುವ ಸರ್ಥವೇ ಸಮಾಸ. ಈ ಕೂಡು ನುಡಿಯನ್ನವನು ಪದವಿಧಿ ಯೆಂದೂ ಕರೆದಿದ್ದಾನೆ. ಕೇಶಿರಾಜನ ಸೂತ್ರದ ಪ್ರಕಾರ, “ಕರು ತಾಯ ಬಳಿಯನುಳಿಯದ ತೆರದಿಂದಂ ನಾಮಪದ ಮದರ್ಥಾನುಗಮಾ ಗೆರಿಗೆ ಸಮಾಸಂ ನೆಗಳ್ಗುಂ”. ಅಂದರೆ, ನಾಮಪದವು ಅರ್ಥಾನುಗತವಾಗುವುದೇ ಸಮಾಸ. ಹೀಗೆ ಅರ್ಥವನ್ನುಂಟು ಮಾಡುವ ಪರಸ್ಪರ ನಾಮಪದಗಳು ಅನ್ಯೋನ್ಯವಾಗಿ ಕೂಡಿರಬೇಕು. ಈ ಅನ್ಯೋನ್ಯವನ್ನು ಅವನು ‘ತಾಯ ಬಳಿಯ ಕರುವಿನಂತೆ’ಯೆಂದು ವರ್ಣಿಸುವನು. ಕೈಪಿಡಿಕಾರರ ಪ್ರಕಾರ, “ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ”.*
================
*ಸೂತ್ರ : “ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ದವಾಗುವುದಕ್ಕೆ ಸಮಾಸ ಎಂದು ಹೆಸರು”*
*ಉದಾ: 1. ತಲೆಯಲ್ಲಿ (ಅಲ್ಲಿ) + (ನೋವು) ನೋವು = ತಲೆನೋವು 2. ಕಣ್ಣಿನಿಂದು (ಇಂದ) +(ಕುರುಡ) ಕುರುಡ = ಕಣ್ಣುಕುರುಡ*
================
*ವಿಗ್ರಹ ವಾಕ್ಯ : “ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.*
*ಉದಾ: ಸಮಸ್ತಪದ = ಪೂರ್ವಪದ + ಉತ್ತರ ಪದ*
*1. ದೇವಮಂದಿರ= ದೇವರ + ಮಂದಿರ 2. ಹೆಜ್ಜೇನು=ಹಿರಿದು + ಜೇನು 3. ಮುಂಗಾಲು= ಕಾಲಿನ + ಮುಂದು*
*(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ)*
===============
*ಸಮಾಸ ಪದಗಳಾಗುವ ಸನ್ನಿವೇಶಗಳು :*
*1. ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ 2. ಕನ್ನಡ – ಕನ್ನಡ ಶಬ್ದಗಳು ಸೇರಿ ತದ್ಭವ-ತದ್ಭವ ಶಬ್ದಗಳು ಸೇರಿ 3. ಅಚ್ಚಗನ್ನಡ ಶಬ್ದ– ತದ್ಭವ ಶಬ್ದಗಳು ಸೇರಿ ಸಮಾಸಪದಗಳಾಗುತ್ತವೆ. ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಲಾರದು.*
================
*ಸಮಾಸದ ವಿಧಗಳು : ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ +ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ +ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು. ಮತ್ತು ಅದು ದೋಷಯುಕ್ತ ಸಮಾಸ ವೆನ್ನಿಸುವುದು. ಕೇಶಿರಾಜನು ಸಮಾಸಗಳಲ್ಲಿ ‘ಸಂಸ್ಕೃತ ಸಮಾಸ’ ಮತ್ತು ‘ಕನ್ನಡ ಸಮಾಸ’ವೆಂದು ಒಂಭತ್ತು ವಿಧಗಳನ್ನು ಮಾಡಿದ್ದಾನೆ.*
===============
*ಕೇಶಿರಾಜ ಸಮಾಸಗಳನ್ನು ಐದು ರೀತಿಯಲ್ಲಿ ವರ್ಗೀಕರಿಸಿದ್ದಾನೆ.(ಒಟ್ಟು 9 ವಿಧದ ಸಮಾಸಗಳು)*
==================
*ಉತ್ತರಪದ ಮುಖ್ಯ ಸಮಾಸ :*
*1. ತತ್ಪುರುಷ ಸಮಾಸ*
*2. ಕರ್ಮಧಾರೆಯ ಸಮಾಸ*
*3. ದ್ವಿಗು ಸಮಾಸ*
*4. ಕ್ರಿಯಾ ಸಮಾಸ*
*5. ಗಮಕ ಸಮಾಸ*
*ಪೂರ್ವಪದ ಮುಖ್ಯ ಸಮಾಸ : 6. ಅವ್ಯಯೀಭಾವ ಸಮಾಸ (ಅಂಶೀ ಸಮಾಸ).*
*ಎರಡೂ ಪದ ಮುಖ್ಯ ಸಮಾಸ :*
*7. ದ್ವಂದ್ವ ಸಮಾಸ*
*ಎರಡೂ ಪದ ಅಮುಖ್ಯ ಸಮಾಸ : 8. ಬಹುವ್ರೀಹಿ ಸಮಾಸ.*
*ವಿರುದ್ಧ ಪದ ಸಮಾಸ : 9 . ಅರಿಸಮಾಸ.*
===============
*1. ತತ್ಪುರುಷ ಸಮಾಸ : “ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”. ಉದಾ:*
*1. ಮರದ + ಕಾಲ = ಮರಗಾಲ 2. ಬೆಟ್ಟದ + ತಾವರೆ = ಬೆಟ್ಟದಾವರೆ 3. ಕೈ + ತಪ್ಪು = ಕೈತಪ್ಪು 4. ಹಗಲಿನಲ್ಲಿ + ಕನಸು = ಹಗಲುಗನಸು* *Etc..ಅರಮನೆ, ಎದೆಗುಹೆ, ಜಲರಾಶಿ, ತಲೆನೋವು*
===============
*2. ಕರ್ಮಧಾರೆಯ ಸಮಾಸ : “ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”. ಉದಾ:*
*1. ಹೊಸದು + ಕನ್ನಡ = ಹೊಸಗನ್ನಡ 2. ಹಿರಿದು + ಜೇನು = ಹೆಜ್ಜೇನು 3. ಕಿರಿಯ + ಗೆಜ್ಜೆ = ಕಿರುಗೆಜ್ಜೆ Etc. ಕೆಂದುಟಿ, ಚಿಕ್ಕಮಗು, ಸಿಡಿಮದ್ದು, ಪಂದತಿ*
===============
*3. ದ್ವಿಗು ಸಮಾಸ : “ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ” ಉದಾ: 1. ಒಂದು + ಕಣ್ಣು = ಒಕ್ಕಣ್ಣು 2. ಎರಡು + ಬಗೆ = ಇಬ್ಬಗೆ 3. ಸಪ್ತ + ಸ್ವರ = ಸಪ್ತಸ್ವರ Etc. ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು*
==============
*4. ಅಂಶಿ ಸಮಾಸ : “ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು” ಅಂಶವೆಂದರೆ ‘ಭಾಗ’ ಅಥವಾ ‘ಅವಯವ’. ಉದಾ: 1. ತಲೆಯ + ಮುಂದು = ಮುಂದಲೆ 2. ಬೆರಳಿನ + ತುದಿ = ತುದಿಬೆರಳು 3. ಕರೆಯ + ಒಳಗು = ಒಳಗೆರೆ Etc. ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ*
=============
*5. ದ್ವಂದ್ವ ಸಮಾಸ : “ಎರಡು ಅಥವಾ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು” ಉದಾ:*
*1. ಕೆರೆಯೂ + ಕಟ್ಟಿಯೂ + ಬಾವಿಯೂ = ಕೆರೆ ಕಟ್ಟೆ ಬಾವಿಗಳು*
*2. ಕಾಫಿಯೂ + ತಿಂಡಿಯೂ = ಕಾಫಿ-ತಿಂಡಿ*
*3. ಬೆಟ್ಟವೂ + ಗುಡ್ಡವೂ = ಬೆಟ್ಟಗುಡ್ಡಗಳು*
*4. ಅಣ್ಣನು + ತಮ್ಮನು= ಅಣ್ಣತಮ್ಮಂದಿರು*
*ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ*
==============
*6. ಬಹುವ್ರೀಹಿ ಸಮಾಸ : “ಎರಡು ಅಥವಾ ಅನೇಕ ನಾಮಪದಗಳು ಸೇರಿ* *ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು”. ಉದಾ:*
*ಮೂರು + ಕಣ್ಣು +ಉಳ್ಳವ* *=ಮುಕ್ಕಣ್ಣ
*ಶಾಂತಿಯ +* *ಖನಿಯಾಗಿರುವನು +* *ಯಾವನೋ=ಶಾಂತಿಖನಿ*
*ಸಹಸ್ರ +ಅಕ್ಷಿಗಳು +* *ಯಾರಿಗೋ =ಸಹಸ್ರಾಕ್ಷ*
*ಪಂಕದಲ್ಲಿ + ಜನಿಸಿದ್ದು**+ *ಯಾವುದೊ=ಪಂಕಜ*
*ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ*
===============
*7. ಕ್ರಿಯಾ ಸಮಾಸ : “ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ”. ಉದಾ: ಸುಳ್ಳನ್ನು +ಆಡು=ಸುಳ್ಳಾಡು / ಕಣ್ಣನ್ನು +ತೆರೆ=ಕಣ್ದೆರೆ / ವಿಷವನ್ನು +ಕಾರು =ವಿಷಕಾರು / ಕೈಯನ್ನು +ಮುಗಿ=ಕೈಮುಗಿ / Etc. ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು*
*8. ಗಮಕ ಸಮಾಸ : “ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು”.* *ಉದಾ:*
* *ಸರ್ವನಾಮಕ್ಕೆ:*
*ಅವನು +ಹುಡುಗ=ಆ ಹುಡುಗ*
*ಇವಳು + ಹುಡುಗಿ = ಈ ಹುಡುಗಿ*
*ಯಾವುದು+ ಮರ=ಯಾವಮರ*
* *ಕೃಂದತಕ್ಕೆ:*
*ಮಾಡಿದುದು+ಅಡುಗೆ =ಮಾಡಿದಡುಗೆ*
*ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು*
*ಉಡುವುದು+ದಾರ=ಉಡುದಾರ*
*ಸುಡುಗಾಡು, ಬೆಂದಡಿಗೆ, ಕಡೆಗೋಲು*
* *ಗುಣವಾಚಕಕ್ಕೆ:*
*ಹಸಿಯದು* *+ಕಾಯಿ=ಹಸಿಯಕಾಯಿ*
*ಹಳೆಯದು +ಕನ್ನಡ=ಹಳೆಗನ್ನಡ
*ಕಿರಿಮಗಳು, ಬಿಳಿಯಬಟ್ಟೆ ,* *ಅರಳುಮೊಗ್ಗು*
* *ಸಂಖ್ಯೆಗೆ:*
*ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು*
ಮೂವತ್ತು, ಹೆಪ್ಪತ್ತು, ಇಪ್ಪತೈದು.*
===========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ