ಬುಧವಾರ, ಫೆಬ್ರವರಿ 14, 2018

ಮೈಸೂರಿನಲ್ಲಿ ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳ

ಮೈಸೂರಿನಲ್ಲಿ ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳ
===============
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಫೆಬ್ರವರಿ ಅಂತ್ಯದ ವೇಳೆಗೆ ಇಲ್ಲವೆ ಮಾರ್ಚ್ ಮೊದಲ ವಾರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ನಿರ್ಧರಿಸಿದೆ. ಸಿದ್ದರಾಮಯ್ಯ ಸರ್ಕಾರ ನಡೆಸಲಿರುವ ಕೊನೆಯ ಉದ್ಯೋಗ ಮೇಳ ಇದಾಗಲಿದ್ದು, ಮೈಸೂರಿನಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಇನ್ಫೋಸಿಸ್,ವಿಪ್ರೋ ಸೇರಿದಂತೆ ಸುಮಾರು 400 ಕಂಪೆನಿಗಳು ಭಾಗವಹಿಸಲಿವೆ. ಉದ್ಯೋಗ ಮೇಳದಲ್ಲಿ ಸುಮಾರು ಎರಡು ಲಕ್ಷ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಏಳರಿಂದ ಎಂಟು ಸಾವಿರ ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ಸ್ಪಷ್ಟ ಪಡಿಸಿವೆ.
°=============
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಉದ್ಯೋಗ ಮೇಳಗಳನ್ನು ನಡೆಸಿದ್ದರೂ ಮೈಸೂರಿನಲ್ಲಿ ನಡೆಯುವ ಉದ್ಯೋಗ ಮೇಳ ಒಂದು ಕಾರಣಕ್ಕಾಗಿ ವಿಶೇಷ ಗಮನ ಸೆಳೆದಿದೆ. ಅದೆಂದರೆ, ಉದ್ಯೋಗ ಮೇಳದಲ್ಲಿ ಭಾಗವಹಿಸಲಿರುವ ಸಂಸ್ಥೆಗಳಿಗೆ ಈಗಾಗಲೇ ಪತ್ರ ಬರೆದಿರುವ ಸರ್ಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡಿದೆ.  ಸಂವಿಧಾನಾತ್ಮಕವಾಗಿ ಕನ್ನಡಿಗರಿಗೇ ಉದ್ಯೋಗ ಸಿಗಬೇಕು ಎಂದು ಹೇಳಲು ಸಾಧ್ಯವಿಲ್ಲವಾದ್ದರಿಂದ ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಪಡೆದು ಉದ್ಯೋಗ ಮೇಳದಲ್ಲಿ ಭಾಗವಹಿಸಲಿರುವ ಕಂಪನಿಗಳಿಗೆ ಈ ಮನವಿ ಮಾಡಿಕೊಳ್ಳಲಾಗಿದೆ.
=============
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಎಂಜಿನಿಯರಿಂಗ್ ಕೋರ್ಸ್‍ಗಳು ಸೇರಿದಂತೆ ವಿವಿಧ ಬಗೆಯ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗಲಿದೆ ಎಂದು ಇವೇ ಮೂಲಗಳು ಹೇಳಿವೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳೇ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, ಒಂದು ವೇಳೆ ಉದ್ಯೋಗ ಮೇಳದಲ್ಲಿ ಆಯ್ಕೆಯಾದವರನ್ನು ಹೊರರಾಜ್ಯದಲ್ಲಿರುವ ತಮ್ಮ ಘಟಕಗಳಿಗೂ ನೇಮಕ ಮಾಡಿಕೊಳ್ಳಬಹುದು.  ಸರ್ಕಾರದ ವತಿಯಿಂದ ನಡೆಯುತ್ತಿರುವ ಕೊನೆಯ ಉದ್ಯೋಗ ಮೇಳವಾದ್ದರಿಂದ ಹೆಚ್ಚು ಮಂದಿಗೆ, ಅದರಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ವಿಶೇಷ ಆದ್ಯತೆ ಸಿಗಬೇಕು ಎಂದು ಸರ್ಕಾರ ಬಯಸಿದ್ದು ಮೇಳದ ಯಶಸ್ಸಿಗೆ ಪೂರಕವಾಗಿ ಪೂರ್ವಭಾವಿ ತಯಾರಿ ಕಾರ್ಯ ನಡೆಯುತ್ತಿದೆ.
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ